ಬೆಂಗಳೂರು : ರಾಜಾ ಹರಿಶ್ಚಂದ್ರನಿಗಿಂತ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸತ್ಯವಂತರಿದ್ದಾರೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಕ್ಕರ್ ಕೊಟ್ಟರು.
ವಿಧಾನಸೌಧ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಜವಾದ 40% ಕಮಿಷನ್ ಈಗ ಶುರುವಾಗಿದೆ ಎಂದು ಕುಟುಕಿದರು.
ಕಾಂಗ್ರೆಸ್ನಲ್ಲಿ ಪೇ ಸಿಎಂ(Pay CM), ಪೇ ಸೋನಿಯಾ(Pay Sonia), ಪೇ ವೇಣುಗೋಪಾಲ್(Pay Venugopal) ಎಲ್ಲಾ ಇದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸತ್ಯ ಹೇಳಿದ್ದಾರೆ, ತಪ್ಪಿಲ್ಲ. ಹೆಚ್ಡಿಕೆಗೆ ಸಾಕಷ್ಟು ಸೋರ್ಸ್ ಇರುತ್ತದೆ. ಕ್ಯಾಬಿನೆಟ್ನಲ್ಲಿ ಏನೇನಿರುತ್ತೆ ಅಂತ ಹೆಚ್ಡಿಕೆಗೆ ಗೊತ್ತಾಗುತ್ತದೆ. ಫಸ್ಟ್ ಫ್ಯಾಕ್ಸ್ ಹೋಗೋದೇ ಹೆಚ್ಡಿಕೆಗೆ ಎಂದು ಹೇಳಿದರು.
ಇದನ್ನೂ ಓದಿ : ತಿಹಾರ್ ಇಂದ ಬಂದವರೂ ನಾಯಕರಾಗಬಹುದು : ಶಾಸಕ ಯತ್ನಾಳ್ ಟಾಂಗ್
ಎಲ್ಲರಿಗೂ ಕಮಿಷನ್ ಹೋಗಬೇಕು
ಕಮಿಷನ್ನಲ್ಲಿ ಕೆ.ಸಿ. ವೇಣುಗೋಪಾಲ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿ ಎಲ್ಲರದ್ದೂ ಪಾಲು ಇದೆ. ರಾಹುಲ್ ಗಾಂಧಿ, ಸುರ್ಜೇವಾಲಾ, ವೇಣುಗೋಪಾಲ್, ಡಿಸಿಎಂ ಎಲ್ಲರಿಗೂ ಕಮಿಷನ್ ಹೋಗಬೇಕು. ಪಾಪ ಡಿಸಿಎಂ ಎಷ್ಟು ಪ್ರಾಮಾಣಿಕರಿದ್ದಾರೋ, ರಾಜಾ ಹರಿಶ್ಚಂದ್ರನಿಗಿಂತ ಡಿಕೆಶಿ ಸತ್ಯವಂತರಿದ್ದಾರೆ ಎಂದು ಛೇಡಿಸಿದರು.
ಮುನಿರತ್ನ ಯಾಕೆ ಕೇಸ್ ಹಾಕ್ತಿದ್ರು?
ಎಲ್ಓಸಿ ಬಿಡುಗಡೆಗೆ ಹಣ ಕೊಡಬೇಕು ಅಂತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದ್ದಾರೆ. ನಮಗೆ 40% ಪರ್ಸೆಂಟೇಜ್ ಕೊಟ್ಟಿದಿದ್ರೆ, ಶಾಸಕ ಮುನಿರತ್ನ ಅವರು ಯಾಕೆ ಮಾನನಷ್ಟ ಕೇಸ್ ಹಾಕ್ತಿದ್ರು? ಕೆಂಪಣ್ಣ ಕಾಂಗ್ರೆಸ್ ಮುಖವಾಣಿ ರೀತಿ ಮಾತನಾಡಿದ್ರು. ಈಗ ಅವರದ್ದೇ ಬಿಲ್ ಪೆಂಡಿಂಗ್ ಇಟ್ಟಿದ್ದಾರೆ. ಬಹುಶಃ ಹೆಚ್ಚಿನ ಪರ್ಸೆಂಟೇಜ್ ಕೊಡಲು ಬಿಲ್ ಪೆಂಡಿಂಗ್ ಇಟ್ಟಿದ್ದಾರೆ. ಕೆಂಪಣ್ಣ ಇರಲಿ, ತಮ್ಮಣ್ಣ ಇರಲಿ ಅನಿವಾರ್ಯವಾಗಿ ಹೇಳಿದ್ದಾರೆ ಎಂದು ಚಾಟಿ ಬೀಸಿದರು.