ಬೆಳಗಾವಿ : ಜಮೀನು ವಿವಾದ ಹಿನ್ನೆಲೆಯಲ್ಲಿ ನಮ್ಮ ಮೇಲೆ ಸಚಿವೆ ಹೆಬ್ಬಾಳ್ಕರ್ ಬೆಂಬಲಿಗರಿಂದ ಹಲ್ಲೆಯನ್ನು ಮಾಡಲಾಗಿದೆ ಅವರ ವಿರುದ್ದ ಕ್ರಮ ಕೈಗೊಳ್ಳಿ ಎಂದು ರೈತ ಮಹಿಳೆ ಇಂದು ಜಿಲ್ಲಾಧಿಕಾರಿಗಳ ಕಾಲಿಗೆರಗಿ ನ್ಯಾಯಕ್ಕಾಗಿ ಅಂಗಲಾಚಿದ ಘಟನೆ ಸಂಭವಿಸಿದೆ.
ಬೆಳಗಾವಿ ತಾಲೂಕಿನ ಬೆಕ್ಕಿನಕೇರಿ ಗ್ರಾಮದ ಸರ್ವೆ ನಂಬರ್ 85/1 ಹಾಗೂ 85/2ರ ಜಮೀನು ಸುಮಾರು 40 ವರ್ಷಗಳಿಂದ ಪುಂಡಲಿಕ ನಾಗೂ ಸಾವಂತ್ ಅವರ ಅಧೀನದಲ್ಲಿತ್ತು.
ಈ ಭೂಮಿಯನ್ನು ಬಿಡುವಂತೆ ಸುನೀಲ್ ಅಮೃತ ಜಾಧವ್ ಎಂಬುವವರು ಈ ರೈತ ಕುಟುಂಬದ ಮೇಲೆ ಹತ್ತರಿಂದ ಹದಿನೈದು ಗೂಂಡಾಗಳೊಂದಿಗೆ ಬಂದು ಮಚ್ಚು,ಲಾಂಗುಗಳಿಂದ ಹಲ್ಲೆ ಮಾಡಿದ್ದಾರೆಂದು ಪುಂಡಲೀಕ ಸಾವಂತ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ನಿರಂತರವಾಗಿ ಹೇಗಾದರೂ ಮಾಡಿ ರೈತ ಪುಂಡಲೀಕನ ಜಮೀನನ್ನು ಕಬಳಿಸಲು ಅನೇಕ ಹುನ್ನಾರಗಳನ್ನು ಹೂಡಿ, ನಾಲ್ಕು ಬಾರಿ ಹಲ್ಲೆ ಮಾಡಿ ಭೂಮಿ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಸಂತ್ರಸ್ತ ರೈತನ ಕುಟುಂಬ ಜಿಲ್ಲಾಧಿಕಾರಿಗಳ ಬಳಿ ತನ್ನ ಅಳಲು ತೋಡಿಕೊಂಡಿದೆ.
ಈ ಘಟನೆಯ ಕುರಿತು ಪೋಲಿಸ್ ಇಲಾಖೆಯಲ್ಲೂ ದೂರು ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಹಲ್ಲೆಕೋರ ಆರೋಪಿಗಳ ವಿರುದ್ದ ಕ್ರಮವನ್ನು ಜರುಗಿಸಲು ಇಲಾಖೆಯು ವಿಫಲವಾಗಿದೆ ಎಂದು ಸಂತ್ರಸ್ತರು ಕಣ್ಣೀರಾದರು.
ಇದನ್ನೂ ಓದಿ : ನಾಳೆ ಪ್ರೆಶ್ ಆಗಿ ನಮ್ಮ ವಿಪಕ್ಷ ನಾಯಕರು ಬರ್ತಾರೆ : ಡಾ.ಕೆ ಸುಧಾಕರ್
ಅಲ್ಲದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಗ್ರಾಮೀಣ ಕ್ಷೇತ್ರದ ಬೆಕ್ಕಿನಕೇರಿಯ ಈ ಸಾವಂತ್ ಕುಟುಂಬ, ಸಚಿವೆಯ ಬೆಂಬಲದಿಂದಲೇ ಈ ಆರೋಪಿಗಳು ಹೀಗೆ ಗೂಂಡಾ ವರ್ತನೆ ಮುಂದುವರೆಸಿದ್ದಾರೆಂದು ಹೆಬ್ಬಾಳ್ಕರ್ ವಿರುದ್ದ ಗಂಭೀರವಾದ ಆರೋಪವನ್ನು ಮಾಡಿದೆ.
ಹಲ್ಲೆಗೊಳಗಾಗಿರುವ ಸಾವಂತ್ ಕುಟುಂಬಕ್ಕೆ ಬೆಕ್ಕಿನಕೇರಿಯ ಗ್ರಾಮಸ್ಥರು ಬೆಂಬಲವಾಗಿ ನಿಂತು ರಾಜಕೀಯ ಪ್ರಭಾವದಿಂದ ರಾಜಾರೋಷವಾಗಿ ತಿರುಗಾಡುತ್ತಿರುವ ಆರೋಪಿಗಳನ್ನು ಹೆಡೆಮುರಿ ಕಟ್ಟಿ ನೊಂದ ರೈತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆಗೆ ಆಗ್ರಹಿಸಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ನೊಂದ ರೈತನ ಕುಟುಂಬಕ್ಕೆ ನ್ಯಾಯ ಒದಗಿಸಿ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ತಾರಾ ಎಂಬುದನ್ನು ಕಾಡು ನೋಡಬೇಕಿದೆ.