ಬೆಳಗಾವಿ : ಸಂಗೊಳ್ಳಿ ರಾಯಣ್ಣ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಸವಣ್ಣನವರ ಇತಿಹಾಸವನ್ನು ತಿರುಚಲು ಅವಕಾಶ ಕೊಡಬಾರದೆಂದು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಪುಸ್ತಕದಲ್ಲಿ ಏನಾದರೂ ಬಂದರೆ ಅದು 10 ವರ್ಷಗಳ ನಂತರ ನಿಜವೆಂದು ಭಾವಿಸಲಾಗುತ್ತದೆ ಎಂದರು.
6 ತಿಂಗಳ ಹಿಂದೆ ಇಲ್ಲಿ ರಾಣಿ ಚನ್ನಮ್ಮ ನಾಟಕ ಪ್ರದರ್ಶನವಾಗಿತ್ತು. ಆದರೆ ಆ ನಾಟಕದಲ್ಲಿ ಅನಾವಶ್ಯಕವಾಗಿ ಟಿಪ್ಪು ಸುಲ್ತಾನ್ ಅವರನ್ನು ಎಳೆದು ತಂದರು ಎಂದು ಪರೋಕ್ಷವಾಗಿ ಬಿಜೆಪಿಯ ವಿರುದ್ದ ಕಿಡಿ ಕಾರಿದರು. ಕಿತ್ತೂರ ರಾಣಿ ಚೆನ್ನಮ್ಮರ ಇತಿಹಾಸಕ್ಕೂ ಹಾಗೂ ಟಿಪ್ಪು ಸುಲ್ತಾನ್ಗೂ ಯಾವುದೇ ಸಂಬಂಧವಿಲ್ಲ ಎಂದ ಅವರು ಮಹಾನ್ ನಾಯಕರ ಬಗ್ಗೆ ಗಂಭೀರವಾಗಿರಬೇಕೆಂದು ತಿಳಿಸಿದರು.
ಇತಿಹಾಸವನ್ನು ತಿರುಚಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು, ಯಾರು ಕೆಲಸ ಮಾಡುತ್ತಾರೆ ಅವರಿಗೆ ಶ್ರೇಯಸ್ಸು ಸಲ್ಲಬೇಕಾಗುತ್ತದೆ ಎಂದು ಹೇಳೆದರು.
ಇದನ್ನೂ ಓದಿ : ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿ ; ರಕ್ತದ ರುಜು ಹಾಕಿ ಆಗ್ರಹ
ಯಾರೋ ಕೆಲಸ ಮಾಡೋದು, ಇನ್ನ್ಯಾರಿಗೋ ಶ್ರೇಯಸ್ಸು ಸಿಗುವಂತಾಗಬಾರದು, ಭಾರತವನ್ನು ಕಟ್ಟಿದ್ದು ನಾವೇ, ರೈಲು ಮಾಡಿದ್ದು ನಾವೇ ಎಂದು ಹೀಗೆ ಹೇಳಿಕೊಳ್ಳುವವರನ್ನು ವಿಶ್ವಗುರು ಎನ್ನುತ್ತೇವೆಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ವಿರುದ್ದ ವ್ಯಂಗ್ಯವಾಡಿದರು. ಅಲ್ಲದೆ ನಿಜವಾಗಿ ಕೆಲಸ ಮಾಡಿದವರು ಎಲ್ಲೋ ಇದ್ದಾರೆ ಎಂದು ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದರು.