ಬೆಂಗಳೂರು : ನೋಟಿಸ್ ಕೊಟ್ಟ ಮೇಲೆ ಶಿಸ್ತು ಪಾಲನಾ ಸಮಿತಿ ಇದೆ ಅಂತ ನನಗೆ ಗೊತ್ತಾಯ್ತು ಎಂದು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಗುಡುಗಿದರು.
ಪಕ್ಷ ವಿರೋಧಿ ಹೇಳಿಕೆ ಹಿನ್ನೆಲೆ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿರುವ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ನಿನ್ನೆ ನೋಟಿಸ್ ಬಂದಿದೆ. ಲಿಖಿತವಾಗಿ ಒಂದು ವಾರದಲ್ಲಿ ಉತ್ತರ ಕೊಡುವಂತೆ ತಿಳಿಸಿದ್ದಾರೆ. ಆದರೆ, ಸಭೆಗೆ ಬರುವಂತೆ ಕರೆ ಮಾಡಿಲ್ಲ ಎಂದು ತಿಳಿಸಿದರು.
ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ನನಗೆ ತಾಯಿ ಸಮಾನ. ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರು. ಪಕ್ಷದ ವಿರುದ್ಧ ಮಾತನಾಡಿಲ್ಲ. ಅನಿವಾರ್ಯವಾಗಿ ನನ್ನ ನೋವನ್ನು ಹೇಳಿದ್ದೇನೆ. ಪಕ್ಷದಲ್ಲಿ ಶಿಸ್ತು ಪಾಲನಾ ಸಮಿತಿ ಇದೆ ಎಂದು ನಿನ್ನೆ ಮಧ್ಯಾಹ್ನ ನನಗೆ ಗೊತ್ತಾಗಿದೆ. ರೇಣುಕಾಚಾರ್ಯಗೆ ನೋಟಿಸ್ ಕೊಟ್ಟ ಮೇಲೆ ಈ ಸಮಿತಿ ಇದೆ ಎಂದು ಗೊತ್ತಾಯ್ತು ಎಂದು ಹೇಳಿದರು.
ಇದನ್ನೂ ಓದಿ : ಪ್ರದೀಪ್ ಈಶ್ವರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಡಾ.ಕೆ ಸುಧಾಕರ್
ನನಗ್ಯಾಕೆ ನೋಟಿಸ್ ಕೊಟ್ಟಿದ್ದಾರೆ?
ನನಗೊಬ್ಬನಿಗೆ ಏಕೆ ನೋಟಿಸ್ ಕೊಟ್ಟಿದ್ದಾರೆ? ಬೇರೆಯವರು ಎಷ್ಟು ಮಂದಿ ಮಾತನಾಡಿದ್ದಾರೆ. ಅವರಿಗೆ ಏಕೆ ನೋಟಿಸ್ ಕೊಟ್ಟಿಲ್ಲ? ಬಿ.ಎಸ್ ಯಡಿಯೂರಪ್ಪನವರ ಪರ ಯಾರು ವಾಸ್ತವಾಂಶ ಹೇಳ್ತಾರೋ ಅವರನ್ನು ದೂರ, ಗುರಿ ಮಾಡುವ ಕೆಲಸ ಮಾಡುತ್ತಾರೆ ಎಂದು ರೇಣುಕಾಚಾರ್ಯ ಕಿಡಿಕಾರಿದರು.
ಕೋಳಿ ಕೂಗದ ಹಳ್ಳಿಗಳಿಲ್ಲ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೋಡದ ಹಳ್ಳಿಗಳಿಲ್ಲ. ಯಡಿಯೂರಪ್ಪ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು.