Saturday, November 2, 2024

ಸ್ವಯಂಘೋಷಿತ ಆರ್ಥಿಕ ತಜ್ಞರೇ, 15 ಕೆಜಿ ಅಕ್ಕಿ ಯಾವಾಗ ಕೊಡ್ತೀರಿ? : ನಳಿನ್ ಕುಮಾರ್ ಕಟೀಲ್

ಬೆಂಗಳೂರು : ಸಿದ್ದರಾಮಯ್ಯ ಅವರೇ ಒಟ್ಟು 15 ಕಿಲೋ ಅಕ್ಕಿ ಯಾವಾಗ ಕೊಡ್ತೀರಿ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕಟೀಲ್, ಸ್ವಯಂಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯನರವರೇ, ರಾಜ್ಯದ ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ ಕೊಡ್ತೀವಿ ಅಂತ ಕಂಡ ಕಂಡಲ್ಲಿ ಭಾಷಣ ಮಾಡಿದ್ದೀರಿ. ಈಗಾಗಲೇ ಪ್ರಧಾನಿ ಮೋದಿ ಅವರ ಸರ್ಕಾರ 5 ಕಿಲೋ ಅಕ್ಕಿ ಕೊಡ್ತಿದೆ.‌ ಇದರ ಜೊತೆಗೆ ನೀವು ಭಾಷಣ ಮಾಡಿದ 10 ಕಿಲೋ ಅಕ್ಕಿ ಸೇರಿಸಿ, ಒಟ್ಟು 15 ಕಿಲೋ ಅಕ್ಕಿ ಯಾವಾಗ ಕೊಡ್ತೀರಿ? ಎಂದು ವಾಗ್ದಾಳಿ ನಡೆಸಿದ್ದಾರೆ.

ಹೈಕಮಾಂಡಿಗೆ ದುಡ್ಡು ತಿನ್ನಿಸ್ತೀರಾ

ಅಕ್ಕಿ ಬದಲು ದುಡ್ಡು ನೀಡಿ ಎಂದಾಗ, ದುಡ್ಡನ್ನು ತಿನ್ನೋಕೆ ಆಗುತ್ತಾ ಅಂತ ಉದ್ಧಟತನ ಪ್ರದರ್ಶಿಸಿದ್ರಿ. ಈಗ ಕಿಲೋಗೆ 34 ರೂಪಾಯಿ ಕೊಡ್ತೇನೆ ಎಂದು ಯೂಟರ್ನ್ ಹೊಡೆದಿದ್ದೀರಿ. ಈಗ ದುಡ್ಡು ತಿನ್ನೋಕೆ ಆಗುತ್ತಾ? ಸಿದ್ದರಾಮಯ್ಯನವರೇ,  #ATMSarkar ಹೈಕಮಾಂಡಿಗೆ ದುಡ್ಡು ತಿನ್ನಿಸೋಕೆ ಮಾಡಿದ ಯೋಜನೆಯಾ ಇದು? ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ನಿಮಗೆ ಏನು ತಿಂದು ಅಭ್ಯಾಸ? ಅನ್ನವೋ, ಹಣವೊ? : ಶಾಸಕ ಯತ್ನಾಳ್

34 ರೂ.ಗೆ ಯೋಗ್ಯವಾದ ಅಕ್ಕಿ ಸಿಗುತ್ತಾ?

ಅಕ್ಕಿ ಬದಲಾಗಿ, ಪ್ರತಿ ಕಿಲೋಗೆ 34 ರೂಪಾಯಿ ನೀಡುವುದಾಗಿ ಘೋಷಿಸಿದ ಸಿದ್ದರಾಮಯ್ಯನವರೇ, ಈ ಮೊತ್ತಕ್ಕೆ ಊಟಕ್ಕೆ ಯೋಗ್ಯವಾದ ಅಕ್ಕಿ ರಾಜ್ಯದ ಯಾವ ಗಿರಣಿಯಲ್ಲಿ ಸಿಗುತ್ತದೆ ಅಂತ ಜನರಿಗೆ ತಿಳಿಸಿ. ಇಲ್ಲವಾದಲ್ಲಿ ಯೋಗ್ಯ ಅಕ್ಕಿಗೆ ಯಾವ ದರ ಇರುತ್ತದೋ, ಅಷ್ಟೇ ಮೊತ್ತವನ್ನು ನೀವು ಜನತೆಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕೈಲಾಗದ ಗ್ಯಾರಂಟಿಗಳು

ಅಕ್ಕಿಯನ್ನು ಹೊಂದಿಸಲು ‘ಕೈ’ಲಾಗದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಆಡಳಿತದ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ವಿನಾಕಾರಣ ದೂಷಿಸುತ್ತಿದ್ದಾರೆ. ಕೈಲಾಗದ ಮುಖ್ಯಮಂತ್ರಿಗಳ, ಕೈಲಾಗದ ಗ್ಯಾರಂಟಿಗಳು ಕಾಂಗ್ರೆಸ್ ಮುಖವಾಡವನ್ನು ಬಯಲು ಮಾಡಿದೆ ಎಂದು ಕಟೀಲ್ ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES