ಬೆಂಗಳೂರು : ಕಾಂಗ್ರೆಸ್ ನವರು ವಾಗ್ದಾನ ಕೊಟ್ಟಂತೆ 10 ಕಿಲೋ ಅಕ್ಕಿಯನ್ನು ಕೊಡಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷ ಮನೆ ಮನೆಗೆ ಹೋಗಿ ಗ್ಯಾರಂಟಿ ಕಾರ್ಡ್ ಕೊಟ್ಟಿತ್ತು. ಅದನ್ನು ಚಾಚು ತಪ್ಪದೇ ಕಾರ್ಯರೂಪಕ್ಕೆ ತರಬೇಕು ಎಂದರು.
ಅದಕ್ಕಾಗಿ ಜುಲೈ 4ರಂದು ಗಾಂಧಿ ಪ್ರತಿಮೆ ಎದುರು ಧರಣಿ ಮಾಡುತ್ತೇವೆ. ಒಂದು ದಿನ ಧರಣಿ ಸತ್ಯಾಗ್ರಹ ಮಾಡಲು ತೀರ್ಮಾನ ಕೈಗೊಂಡಿದ್ದೇವೆ. ಸದನದ ಒಳಗೂ ಇದರ ಬಗ್ಗೆ ಹೋರಾಟ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿ ; ರಕ್ತದ ರುಜು ಹಾಕಿ ಆಗ್ರಹ
80 ಯುನಿಟ್ ಷರತ್ತು ತೆಗೆದು ಹಾಕಿ
ನಿರುದ್ಯೋಗಿಗಳಿಗೆ 3,000 ರೂಪಾಯಿ ಕೊಡಬೇಕು. 200 ಯುನಿಟ್ ವಿದ್ಯುತ್ ಕೊಡಲೇಬೇಕು. 80 ಯುನಿಟ್ ಷರತ್ತು ತೆಗೆದು ಹಾಕಬೇಕು. ಎಲ್ಲ ಮಹಿಳೆಯರಿಗೂ 2,000 ರೂಪಾಯಿ ಕೊಡಲೇಬೇಕು. ಕರೆಂಟ್ ಬಿಲ್ ಹೆಚ್ಚಳ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಪಕ್ಷಕ್ಕೆ ಮುಜಗರ ಆಗುವ ಹೇಳಿಕೆ
ಸ್ವಪಕ್ಷ ನಾಯಕರ ವಿರುದ್ಧವೇ ನಾಯಕರು ಮಾತನಾಡಿರುವ ವಿಚಾರ ಕುರಿತು ಮಾತನಾಡಿ, ಇಂದು ಚರ್ಚಿಸಿ ನಿರ್ಣಯ ಮಾಡಿದ್ದೇವೆ. ಪಕ್ಷಕ್ಕೆ ಮುಜಗರ ಆಗುವ ಹೇಳಿಕೆ ಕೊಡಬಾರದು. ಇನ್ಮುಂದೆ ಇದು ಮರುಕಳಿಸದಂತೆ ಎಚ್ಚರಿಕೆ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಪಕ್ಷ ನಿಮ್ಮ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಗುತ್ತದೆ ಅಂತ ತಿಳಿಸಿದ್ದೇವೆ ಎಂದು ಮಾಹಿತಿ ನೀಡಿದರು.