ಬೆಂಗಳೂರು : ಕಾಂಗ್ರೆಸ್ ನವರು ನಮ್ಮ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ರು, ಈಗ ಇದು 60% ಕಮಿಷನ್ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕುಟುಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗಾಗಲೇ ಅಂಗಡಿ ವ್ಯಾಪಾರ ಶುರುವಾಗಿದೆ. ನಾವು ಕಾದು ನೋಡುತ್ತೇವೆ ಎಂದು ಹೇಳಿದರು.
ಗುತ್ತಿಗೆಯಲ್ಲಿ ಕಮಿಷನ್ ಶುರಿವಾಗಿದೆ. ವರ್ಗಾವಣೆ ದಂಧೆ ಶುರುವಾಗಿದೆ. ನಾವು ಎಲ್ಲವನ್ನೂ ಕಾದು ನೋಡುತ್ತೇವೆ, ಹೋರಾಟ ಮಾಡುತ್ತೇವೆ. ನಾನು ಈಗಾಗಲೇ ಎಲ್ಲರಿಗೂ ಕರೆ ಮಾಡಿ ವಿನಂತಿ ಮಾಡಿದ್ದೇನೆ. ತಡೆ ಹಿಡಿದಿರುವ ಕಾಮಗಾರಿಗಳಿಗೂ ಕಮಿಷನ್ ಕೇಳುತ್ತಿದ್ದಾರೆ. ಸಿಎಂ ಕಚೇರಿಯಲ್ಲಿ ಇಬ್ಬರು ವರ್ಗಾವಣೆ ದಂಧೆ ಮಾಡುತ್ತಿದ್ದಾರೆ ಅಂತ ಮಾಧ್ಯಮಗಳಲ್ಲಿ ಬಂದಿದೆ. ಅವರು ಯಾರು ಅಂತ ಮಾಧ್ಯಮಗಳಲ್ಲೇ ಬರ್ತಿದೆ ಎಂದು ಕಟೀಲ್ ಆರೋಪ ಮಾಡಿದರು.
ಇದನ್ನೂ ಓದಿ : ಅಕ್ಕಿಯಲ್ಲೂ ಕಮಿಷನ್ ಹೊಡೆಯೋ ಯತ್ನವಿರಬಹುದು : ಬಿ.ವೈ ವಿಜಯೇಂದ್ರ
ತನಿಖೆ ಮಾಡಲಿ, ಬಹಿರಂಗ ಪಡಿಸಲಿ
ಕಾಂಗ್ರೆಸ್ ನಿಂದ ತನಿಖಾಸ್ತ್ರ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಅವರು, ನಮ್ಮ ಕಾಲದಲ್ಲಿ ಆಗಿರುವ ಎಲ್ಲವನ್ನೂ ತನಿಖೆ ಮಾಡಲಿ, ಬಹಿರಂಗ ಪಡಿಸಲಿ. ನಮ್ಮ ಮೇಲೆ ಅವರು ಹಿಂದೆ ಆರೋಪ ಮಾಡಿದ್ದರು. ಒಂದೇ ಒಂದು ಆರೋಪಕ್ಕೂ ಅವರು ಲೋಕಾಯುಕ್ತಕ್ಕೆ ದೂರು ಕೊಡಲಿಲ್ಲ. ಎಲ್ಲವನ್ನೂ ಇವತ್ತು ಅವರು ತನಿಖೆ ಮಾಡಿಸಲಿ. ನಾವು ಇದ್ದಾಗ ಅವರ ವಿರುದ್ಧ ಲೋಕಾಯುಕ್ತ ತನಿಖೆ ವಹಿಸಿದ್ದೆವು. ಇದನ್ನೂ ಅವರು ತನಿಖೆ ಮಾಡಿಸಲಿ ಎಂದು ಛೇಡಿಸಿದರು.
ಬಿಜೆಪಿಯಲ್ಲಿ ಮನಬಂದಂತೆ ನಾಯಕರು ಹೇಳಿಕೆ ನೀಡುತ್ತಿರುವ ವಿಚಾರ ಕುರಿತು ಮಾತನಾಡಿ, ನಾನು ಈಗಾಗಲೇ ಮಾತನಾಡದಂತೆ ವಿನಂತಿ ಮಾಡಿದ್ದೇನೆ. ಮತ್ತೆ ಎಲ್ಲರನ್ನೂ ಕರೆದು ಮಾತನಾಡುತ್ತೇನೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.