Saturday, November 2, 2024

ಮಾರ್ಕೆಟ್ ನಲ್ಲಿ ಕೆಜಿ ಅಕ್ಕಿ 60 ರೂ. ಇದೆ, ನೀವು 34 ರೂ. ಅಂತೀರಿ : ಬಸವರಾಜ ಬೊಮ್ಮಾಯಿ

ಬೆಂಗಳೂರು : 5 ಕಿಲೋ ಅಕ್ಕಿ ಜೊತೆಗೆ 5 ಕಿಲೋ ಅಕ್ಕಿಯ ದುಡ್ಡನ್ನು ಫಲಾನುಭವಿಗಳಿಗೆ ಕೊಡುತ್ತೇವೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರೇ ನೀವೆ ಹೇಳಿದ್ರಿ, ಅಕ್ಕಿ ಬದಲು ದುಡ್ಡು ನೀಡಿದ್ರೆ ಹಣ ತಿನ್ನೋಕೆ ಆಗತ್ತಾ ಎಂದಿದ್ರಿ ಎಂದು ಕುಟುಕಿದರು.

ಈಗ ನಾವು ಕೇಳ್ತೇವೆ, ದುಡ್ಡು ತಿನ್ನೋಕೆ ಆಗುತ್ತಾ? ನೀವು ಹೇಳಿದ್ದು ಹತ್ತು ಕಿಲೋ ಅಕ್ಕಿ. ಮಾರ್ಕೆಟ್ ನಲ್ಲಿ ಕಿಲೋ ಅಕ್ಕಿಗೆ 60 ರೂಪಾಯಿ ಇದೆ. ನೀವು 34 ರೂಪಾಯಿ ಕೊಡ್ತೀವಿ ಅಂತೀರಿ. ಹಾಗಾದರೆ 2.5 ಕಿಲೋಗೆ ನೀವು ಹಣ ಕೊಡ್ತಾ ಇದ್ದೀರಿ. ನೀವು ಕೊಡುವ ಹಣದಲ್ಲಿ ಕೇವಲ 2.5 ಕಿಲೋ ಅಕ್ಕಿ ಮಾತ್ರ ಸಿಗುತ್ತದೆ ಎಂದು ಛೇಡಿಸಿದರು.

ಇದನ್ನೂ ಓದಿ : ಬಡವರ ಕಾರ್ಯಕ್ರಮಕ್ಕೆ ಕಲ್ಲು ಹಾಕುವ ಕೆಲಸ : ಸಿದ್ದರಾಮಯ್ಯ 

5+5 ಅಕ್ಕಿ ಕೊಡ್ತೇವೆ ಅಂತ ಹೇಳಿದ್ರಾ?

ಕೇಂದ್ರ ಸರ್ಕಾರ ಐದು ಕಿಲೋ ಅಕ್ಕಿ ಕೊಡುತ್ತಿದೆ‌. ನೀವು ಚುನಾವಣಾ ಪೂರ್ವದಲ್ಲಿ ಹೇಳಿದ್ರಾ 5+5 ಅಕ್ಕಿ ಕೊಡ್ತೇವೆ ಅಂತ? ಇಲ್ಲ, ಹತ್ತು ಕಿಲೋ ಕೊಡ್ತೇವೆ ಎಂದಿದ್ರಿ. ಈಗ ಕೊಡಿ. ಕೇಂದ್ರದ ಮೇಲೆ ಸುಮ್ಮನೆ ಗೂಬೆ ಕೂರಿಸ್ತಾ ಇದ್ದೀರಿ ಎಂದು ಬಸವರಾಜ ಬೊಮ್ಮಾಯಿ ಆಕ್ರೋಶ ಹೊರಹಾಕಿದರು.

ಸಿದ್ದರಾಮಯ್ಯನವರೇ ನೀವು ಮಾತಿಗೆ ತಪ್ಪಿದ್ದೀರಿ. ಜನರಿಗೆ ನೀವು ಮೋಸ ಮಾಡಿದ್ದೀರಿ. ಅಕ್ಕಿ ಅಂತ ಹೇಳಿ ದವಸ ಧಾನ್ಯ ಕೊಡುತ್ತೇವೆ ಅಂತ ಹೇಳಿದ್ರಿ. ಈಗ ಮಾತು ಬದಲಿಸುತ್ತಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES