ಬೆಂಗಳೂರು : ಒಂದು ಕಾಳು ಅಕ್ಕಿ ಕಡಿಮೆಯಾದ್ರೂ ಪ್ರತಿಭಟನೆ ಮಾಡೋದಾಗಿ ಹೇಳಿಕೆ ನೀಡಿರುವ ಬಿಜೆಪಿ ನಾಯಕರಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ವಿಧಾನಸಭಾ ಚುನಾವಣೆ ಸೋಲನ್ನು ವಿಮರ್ಶೆ ಮಾಡಿ, ಒಪ್ಪಿಕೊಳ್ಳುವುದಕ್ಕೆ ಆಗುತ್ತಿಲ್ಲ ಎಂದು ಕುಟುಕಿದರು.
ನಾವೇನು ಮಾತು ಕೊಟ್ಟಿದ್ದೆವೋ ಅದನ್ನು ಉಳಿಸಿಕೊಳ್ಳುತ್ತೇವೆ. 5 ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ. ಒಂದು ಕಾಳು ಕಡಿಮೆಯಾದ್ರೂ ಪ್ರತಿಭಟನೆ ಮಾಡೋದಾಗಿ ಹೇಳಿದ್ದಾರೆ. 365 ದಿನವೂ ಪ್ರತಿಭಟನೆ ಮಾಡಲಿ. ಅವರು ಹೋರಾಟ ಮಾಡುತ್ತಿರಬೇಕು, ವಿರೋಧ ಮಾಡುತ್ತಿರಬೇಕು. ಬಿಜೆಪಿಯವರು ವಿಪಕ್ಷ ಸ್ಥಾನದಲ್ಲಿ ಕೂತಿರಬೇಕು, ನಾವು ಆಡಳಿತದಲ್ಲಿ ಜನರ ಸೇವೆ ಮಾಡುತ್ತಿರಬೇಕು ಎಂದು ಛೇಡಿಸಿದರು.
ಇದನ್ನೂ ಓದಿ : ಮೋದಿ ಸೋಲಲ್ಲ, ರಾಹುಲ್‍ಗೆ ಮದುವೆ ಆಗಲ್ಲ : ಬೊಮ್ಮಾಯಿ ಲೇವಡಿ
ಅಕ್ಕಿ ಕಾನೂನು ತಂದಿದ್ದು ಯುಪಿಎ
ಭತ್ತ, ಅಕ್ಕಿ ಒಂದೇ ದಿನದಲ್ಲಿ ಬೆಳೆಯೋಕೆ ಆಗುತ್ತಾ? ಅಕ್ಕಿ ಕೊಡಿ ಅಂತ ಕೇಂದ್ರ ಸರ್ಕಾರವನ್ನು ಕೇಳ್ತಿದ್ದೇವೆ, ಅವರು ಕೊಡುತ್ತಿಲ್ಲ. ಪ್ರಧಾನಿ ಮೋದಿ ಅಕ್ಕಿ ಕೊಟ್ಟಿದ್ದು ಅಂತ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಸೋನಿಯಾ ಗಾಂಧಿ ನೇತೃತ್ವದ ಯುಪಿಎನಲ್ಲಿ ಮನಮೋಹನ್ ಸಿಂಗ್ ಅಕ್ಕಿ ಕಾನೂನು ತಂದಿದ್ದು. ಇದು ಕಾಂಗ್ರೆಸ್ ಸರ್ಕಾರದ ಯೋಜನೆ ಎಂದು ಹೇಳಿದರು.
ಅನ್ನಭಾಗ್ಯ ಘೋಷಿಸಿದ್ದು ಸಿದ್ದರಾಮಯ್ಯ
ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ದರು. ಅನ್ನಭಾಗ್ಯ ಕಾನೂನು ತಂದಿದ್ದು ಕಾಂಗ್ರೆಸ್. 5 ಕಿಲೋ ನಿಂದ 10 ಕಿಲೋ ಅಂತ ತಂದಿದ್ದೇವೆ. ರಾಗಿ, ಗೋಧಿ ಕೊಡಿ ಅಂತ ಕೆಲವರು ಕೇಳಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ಕೊಡದೇ ಇದ್ದಾಗ ವಿಧಿ ಇಲ್ಲದೇ ಬೇರೆ ಕಡೆ ಖರೀದಿ ಮಾಡಿ ಕೊಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.