ಬೆಂಗಳೂರು : 135 ಸೀಟು ಸಿಕ್ಕಿದ ಮೇಲೆ ಪ್ರಣಾಳಿಕೆ ಪುಸ್ತಕ 30 ದಿನದಲ್ಲಿ ಗೆದ್ದಲು ಹಿಡಿಯಿತೇ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕುಟುಕಿದ್ದಾರೆ.
ಬೆಲೆ ಏರಿಕೆ ಕುರಿತು ಟ್ವೀಟ್ ಮಾಡಿದರುವ ಅವರು, ರಾಜ್ಯ ಕಾಂಗ್ರೆಸ್ ತಾನು ಕೊಟ್ಟ ಭರವಸೆಗಳ ಬಗ್ಗೆ ಉತ್ತರ ಹೇಳಲಿ? ಬೆಲೆಗಳ ಇಳಿಕೆಯ ಬಗ್ಗೆ ಹೇಳಿದ್ದೆಲ್ಲ ಎಲ್ಲಿ ಹೋಯಿತು? ಮತ ಪಡೆದ ಮೇಲೆ ಎಲ್ಲ ಮರೆತು ಹೋಯಿತೇ? ಎಂದು ಛೇಡಿಸಿದ್ದಾರೆ.
ಹೊಸ ಹುಂಡಿಗೆ ಜಾಗ ಹುಡುಕುತ್ತಿದೆ
ಬೆಲೆ ಏರಿಕೆ ಪಟ್ಟಿ ಓದಿದರೆ ಎದೆ ನಡುಗುತ್ತೆ. ಅಕ್ಕಿ ಬೆಲೆ ಕಿಲೋಗೆ 20 ರೂ. ಏರಿದ್ದರೆ, ಕಿಲೋ ಟೊಮ್ಯಾಟೋ ಬೆಲೆ 100 ರೂ. ಮುಟ್ಟಿದೆ. ಈ ಏರಿಕೆ ಲಾಭ ಅತ್ತ ರೈತನಿಗೂ ಇಲ್ಲ, ಇತ್ತ ಗ್ರಾಹಕನಿಗೂ ಇಲ್ಲ. ಜನ ಬೆಲೆ ಬೆಂಕಿಯಲ್ಲಿ ಬೇಯುತ್ತಿದ್ದರೆ ಈ ಸರ್ಕಾರ ಆ ಬೇಗೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿದೆ, ಹೊಸ ಹುಂಡಿಗಳಿಗೆ ಜಾಗ ಹುಡುಕುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಶತಕದತ್ತ ಟೊಮ್ಯಾಟೋ ಬೆಲೆ ಏರಿಕೆ
5 ಹೊಸ ಗ್ಯಾರಂಟಿ ನೀಡುತ್ತಿದೆ
ಕಾಂಗ್ರೆಸ್ ಪಕ್ಷ ಜನತೆಗೆ ಐದು ಹೊಸ ಗ್ಯಾರಂಟಿ ನೀಡುತ್ತಿದೆ. ಅಕ್ಕಿಭಾಗ್ಯ ಹಗಲು ಕನಸು, ಬೆಲೆ ಏರಿಕೆ ಕನಸು ನನಸು. ಗೃಹಜ್ಯೋತಿ ಈಗ ಸುಡುಜ್ಯೋತಿ. ಶಕ್ತಿ ಯೋಜನೆಯಿಂದ ಸಾರಿಗೆ ವ್ಯವಸ್ಥೆಯಲ್ಲಿ ಅರಾಜಕತೆ. ಗೃಹಲಕ್ಷ್ಮಿಗೆ ಗ್ರಹಣ ಹಾಗೂ ನಿದಿರೆಗೆ ಜಾರಿದೆ ಯುವನಿಧಿ. ಇವು ಹೊಸ ಗ್ಯಾರಂಟಿಗಳು ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿದ್ದು ಸಾಕು, ಇನ್ನಾದರೂ ಏರಿದ ಬೆಲೆ ಕಡಿತಕ್ಕೆ ಕ್ರಮ ಕೈಗೊಳ್ಳಲಿ. ಇಲ್ಲವಾದರೆ ರಾಜ್ಯದ ನಾರಿಶಕ್ತಿ ಆಕ್ರೋಶಕ್ಕೆ ನೀವು ನಾಮಾವಶೇಷ ಇಲ್ಲದಂತೆ ಹೋಗುತ್ತೀರಿ. ಎಚ್ಚರ ಎಂದು ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.