ಬಳ್ಳಾರಿ : ರಾಜ್ಯ ಬಿಜೆಪಿ ಅಧ್ಯಕ್ಷನಾಗಿ ಈಗಾಗಲೇ ನನ್ನ ಅವಧಿ ಮುಗಿದಿದೆ. ಅಧ್ಯಕ್ಷ ಸ್ಥಾನದ ಬದಲಾವಣೆ ಪ್ರಕ್ರಿಯೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವು ನಾಯಕರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ನಾನು ಎರಡು ಅವಧಿಗೆ ರಾಜ್ಯಾಧ್ಯಕ್ಷ ಹುದ್ದೆ ನಿಭಾಯಿಸಿದ್ದೇನೆ. ಈಗ ನನ್ನ ಅವಧಿ ಮುಗಿದಿದೆ. ಚುನಾವಣೆ ಇದ್ದ ಹಿನ್ನೆಲೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದೆ. ರಾಜ್ಯಾಧ್ಯಕ್ಷ ಜವಾಬ್ದಾರಿ ವಹಿಸಿಕೊಳ್ಳಲು ಪಕ್ಷದಲ್ಲಿ ಉತ್ತಮ ನಾಯಕರಿದ್ದಾರೆ. ವಿ. ಸೋಮಣ್ಣ ಸೇರಿದಂತೆ ಹಲವರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಅದರ ಬಗ್ಗೆ ನಮ್ಮ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ನುಡಿದರು.
ಇದನ್ನೂ ಓದಿ : ಯಡಿಯೂರಪ್ಪ ಹೇಳಿದ್ದನ್ನು ಇಷ್ಟು ದಿನ ನಾವು ಕೇಳಿಲ್ವಾ? : ವಿ ಸೋಮಣ್ಣ
ನಿರೀಕ್ಷಿತ ಫಲಿತಾಂಶ ಬಂದಿಲ್ಲ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಆದರೂ, ನಮ್ಮ ಕಾರ್ಯಕರ್ತರು ಧೈರ್ಯ ಕಳೆದುಕೊಂಡಿಲ್ಲ. ಕೇಂದ್ರದಲ್ಲಿ ನಮ್ಮ ಸರ್ಕಾರ 9 ವರ್ಷ ಪೂರೈಸಿ ಯಶಸ್ವಿಯಾಗಿ ಮುನ್ನೆಡೆಯತ್ತಿದೆ. ಕಳಂಕರಹಿತವಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ವಿಶ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅತ್ಯಂತ ದೊಡ್ಡ ಗೌರವ ದೊರೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.
ಜನಾರ್ದನ ರೆಡ್ಡಿ ಪಕ್ಚಕ್ಕೆ ಮರಳಲ್ಲ
ದೇಶದಲ್ಲಿ ಶೇ.80 ರಷ್ಟು ಭಯೋತ್ಪಾದನೆ, ನಕ್ಸಲಿಸಂ ಕಡಿಮೆಯಾಗಿದೆ. ಪ್ರಧಾನಿ ನೇತೃತ್ವದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಜನಾರ್ದನ ರೆಡ್ಡಿಯನ್ನು ಮರಳಿ ಪಕ್ಚಕ್ಕೆ ಕರೆತರುವ ಬಗ್ಗೆ ಚರ್ಚಿಸಿಲ್ಲ. ಈ ಬಗ್ಗೆ ಕೇಂದ್ರ ನಾಯಕರು ನಮಗೆ ಯಾವುದೇ ಸೂಚನೆ ಕೂಡ ಕೊಟ್ಟಿಲ್ಲ ಎಂದು ಇದೇ ವೇಳೆ ಕಟೀಲ್ ಸ್ಪಷ್ಟನೆ ನೀಡಿದರು.