ಬೆಂಗಳೂರು : ಆದಾಯ ದುಪ್ಪಟ್ಟು ಮಾಡುತ್ತೇವೆ. ನಾ ಖಾವೂಂಗಾ, ನಾ ಖಾನೇದೂಂಗ ಎಂದವರು ಯಾರು? ಅಚ್ಛೇ ದಿನ್ ತಂದುಕೊಟ್ಟಿದ್ದಾರೆಯೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ಹಮ್ಮಿಕೊಂಡಿದ್ದ 20ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಲಕ್ಷಾಂತರ ಟನ್ ಅಕ್ಕಿ ಇಟ್ಟುಕೊಂಡು ಕುಳಿತಿದೆ. ಆದರೆ, ಅನ್ನಭಾಗ್ಯಕ್ಕೆ ಮಾತ್ರ ಅಕ್ಕಿ ಕೊಡುವುದಿಲ್ಲ ಅಂತ ಪತ್ರ ಬರೆದಿದ್ದಾರೆ. ಈಗ ಧರಣಿ ಮಾಡುತ್ತೇವೆ ಎಂದು ಅರ್ಥವಿಲ್ಲದ ಮಾತಾಡುತ್ತಿದ್ದಾರೆ. ಒಂದು ತಿಂಗಳಿಗೆ 840 ಕೋಟಿ ರೂ. ಅಕ್ಕಿ ಅಗತ್ಯವಿದೆ. ಅಷ್ಟು ದುಡ್ಡು ಕೊಡಲು ನಾವು ಸಿದ್ದವಿದ್ದೇವೆ ಎಂದು ಹೇಳಿದರು.
9 ವರ್ಷ ಕಳೆದ್ರೂ ಈಡೇರಿಸಿಲ್ಲ
ಐದು ಗ್ಯಾರಂಟಿ ಈಡೇರಿಸದಿದ್ದರೆ ಅಧಿವೇಶನದಲ್ಲಿ ಧರಣಿ ಕೂರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ. 15 ಲಕ್ಷ ರೂ.ಗಳನ್ನು ಪ್ರತಿ ಮನೆಗೆ ಕೊಡುತ್ತೇನೆ ಎಂದವರು 9 ವರ್ಷಗಳಾದರೂ ಈಡೇರಿಸಿಲ್ಲ ಎಂದು ಕುಟುಕಿದರು.
ಇದನ್ನೂ ಓದಿ : ಅಮೆರಿಕ ಸೆನೆಟ್ ನಲ್ಲೂ ‘ನಮೋ’ ಜಪ : 79 ಬಾರಿ ಚಪ್ಪಾಳೆ, 15 ಬಾರಿ ಎದ್ದು ನಿಂತು ಗೌರವ
10 ಗಂಟೆ ವಿದ್ಯುತ್ ನೀಡುತ್ತೇವೆ ಅಂದ್ರು
ಯಡಿಯೂರಪ್ಪ ನೀಡಿದ್ದ ಪ್ರಣಾಳಿಕೆಯಲ್ಲಿ ಒಂದು ಲಕ್ಷದವರಿಗಿನ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದರು. 10 ಗಂಟೆ ವಿದ್ಯುತ್ ನೀಡುತ್ತೇವೆ, ನೀರಾವರಿಗೆ ಒಂದೂವರೆ ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಅಂದಿದ್ದರು. ಆದರೆ, ಅವುಗಳನ್ನು ಜಾರಿ ಮಾಡದವರು ಈಗ ಧರಣಿ ಕುಳಿತುಕೊಳ್ಳುವುದಾಗಿ ಹೇಳುತ್ತಿದ್ದಾರೆ. ಈ ಮೂಲಕ ಅವರು ಜನಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಛೇಡಿಸಿದರು.
200 ಯುನಿಟ್ ಫ್ರೀ ಕೊಡೋಕೆ ಆಗುತ್ತಾ?
200 ಯುನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಗೆ 200 ಯುನಿಟ್ ಗೆ ಕೊಡಬೇಕು ಎನ್ನುತ್ತಾರೆ. ವರ್ಷಕ್ಕೆ ಸಾರಾಸರಿ 70 ಯುನಿಟ್ ಖರ್ಚು ಮಾಡುವವರಿಗೆ 200 ಯುನಿಟ್ ಉಚಿತ ಕೊಟ್ಟರೆ ಅದು ದುರುಪಯೋಗ ಮತ್ತು ದುರ್ಬಳಕೆಯಲ್ಲವೇ? ತೆರಿಗೆ ಹಣ ಒಬ್ಬರ ಖಾಸಗಿ ಸ್ವತ್ತಲ್ಲ. ಜನರ ಹಣವನ್ನು ಖರ್ಚು ಮಾಡುವಾಗ ಎಚ್ಚರಿಕೆ ಅಗತ್ಯ ಎಂದು ನಯವಾಗಿಯೇ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಬೀಸಿದರು.