ಹಾಸನ : ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಮಳೆ ಹೋಗಿದೆ. ಇವರು ಅಧಿಕಾರಕ್ಕೆ ಬಂದ ಕೂಡಲೇ ಬರಗಾಲ ಬರುತ್ತೆ ಎಂದು ಮಾಜಿ ಸಚಿವ ಆರ್. ಅಶೋಕ್ ಲೇವಡಿ ಮಾಡಿದರು.
ಹಾಸನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿ.ಎಸ್ ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ ಮಳೆ ಬರುತ್ತೆ ಎಂದು ಹೇಳಿದರು.
ಕೆ.ಆರ್.ಎಸ್ ನಲ್ಲಿ ಕುಡಿಯೋ ನೀರಿನ ಪ್ರಮಾಣ ಕುಸಿದಿದೆ. ವಿದ್ಯುತ್ ಉತ್ಪಾದನೆ ಕುಸಿಯುತ್ತಿದೆ. ರಾಜ್ಯದಲ್ಲಿ ಈಗಿರೋರು ಸಮ್ಮಿಶ್ರ ಸರ್ಕಾರ. ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯರ ಸಮ್ಮಿಶ್ರ ಸರ್ಕಾರ ಇದು. 50-50 ಅಧಿಕಾರ ಹಂಚಿಕೆ ಅಂತೆ. ಕೊಡ್ತಾರೊ ಇಲ್ಲವೊ ಗೊತ್ತಿಲ್ಲ. ಖಂಡಿತವಾಗಿಯೂ ಅಧಿಕಾರ ಕೊಡಲ್ಲ. ಡಿ.ಕೆ ಶಿವಕುಮಾರ್ ಅವರದ್ದು ತಿರುಕನ ಕನಸು ಎಂದು ಕಿಚಾಯಿಸಿದರು.
ಇದನ್ನೂ ಓದಿ : ಕೇಂದ್ರ ಸರ್ಕಾರ ಲಕ್ಷಾಂತರ ಟನ್ ಅಕ್ಕಿ ಇಟ್ಕೊಂಡು ಕುಳಿತಿದೆ : ಸಿದ್ದರಾಮಯ್ಯ ಗುಡುಗು
ಈ ಸರ್ಕಾರ ಉಳಿಯೋದಿಲ್ಲ
ಕರ್ನಾಟಕದಲ್ಲಿ ಎಡಬಿಡಂಗಿ ಸರ್ಕಾರ ಅಧಿಕಾರಕ್ಕೆ ಬಂದಿದೆ. 10 ಕಿಲೋ ಅಕ್ಕಿ ಕೊಡ್ತಿವಿ ಅಂದರು, ಈಗ ಉಲ್ಟಾ ಹೊಡೆಯುತ್ತಿದ್ದಾರೆ. ಬೋಗಸ್ ಮಾಡಿ ಉಚಿತ ಗ್ಯಾರಂಟಿ ಎಂದು ಹೇಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸರ್ಕಾರ ಬಂದ 24 ಗಂಟೆಯಲ್ಲಿ ಗ್ಯಾರಂಟಿ ಕಾರ್ಯಕ್ರಮ ಜಾರಿ ಅಂದರು. ಆದರೆ, ಒಂದುವರೆ ತಿಂಗಳಾದರೂ ಜಾರಿ ಮಾಡಲು ಆಗಿಲ್ಲ. ದೇಶದಲ್ಲಿ ಮೋದಿ ಮತ್ತೆ ಪ್ರಧಾನಿ ಆದರೆ ಈ ಸರ್ಕಾರ ಉಳಿಯೋದಿಲ್ಲ ಎಂದು ಆರ್. ಅಶೋಕ್ ಭವಿಷ್ಯ ನುಡಿದರು.
ಮೋದಿ ಅಕ್ಕಿ ಅಂತ ಒಪ್ಪಿಕೊಂಡ್ರಲ್ಲ
ರಾಜ್ಯದ ಜನರಿಗೆ ಕೊಡ್ತಾ ಇರೋ ಅಕ್ಕಿ ಮೋದಿ ಅವರದ್ದು, ಚೀಲ ಮಾತ್ರ ಕಾಂಗ್ರೆಸ್‌ನದ್ದು. ಇಷ್ಟು ದಿನ ಜನರಿಗೆ ಕೊಡ್ತಿರೊ ಅಕ್ಕಿ ಮೋದಿ ಅವರದ್ದು ಎಂದು ಯಾರಿಗೂ ಗೊತ್ತಿರಲಿಲ್ಲ. ಈಗ ದಿನ ಬೆಳಗಾದ್ರೆ ಕಾಂಗ್ರೆಸ್ ನಾಯಕರೇ ಹೇಳ್ತಾ ಇದಾರೆ. ಮೋದಿಯವರದ್ದು ಐದು ಕಿಲೋ ಅಕ್ಕಿ, ಇನ್ನೂ 5 ಕಿಲೋ ಅಕ್ಕಿ ನಾವು ಕೊಡ್ತಿವಿ ಅಂತ. ಈಗಲಾದರೂ ಮೋದಿ ಅಕ್ಕಿ ಅಂತ ಒಪ್ಪಿಕೊಂಡ್ರಲ್ಲ ಅದಕ್ಕೆ ಅವರಿಗೆ ಧನ್ಯವಾದ ಹೇಳ್ತಿವಿ ಎಂದು ಕುಟುಕಿದರು.