ಬೆಂಗಳೂರು : ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ದಾಖಲೆ ಬರೆದಿದ್ದಾರೆ.
ಅಮೆರಿಕದ ಸೆನೆಟ್‌ನಲ್ಲಿ ಮೋದಿ ಮಾಡಿದ ಭಾಷಣ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯ್ತು. ಭಾಷಣದ ಮಧ್ಯೆ ಮಧ್ಯೆ 79ಕ್ಕೂ ಹೆಚ್ಚು ಬಾರಿ ಸಂಸತ್ ಸದಸ್ಯರು ಚಪ್ಪಾಳೆ ತಟ್ಟಿದರು. 15ಕ್ಕೂ ಹೆಚ್ಚು ಬಾರಿ ಎದ್ದು ನಿಂತು ಗೌರವ ಸೂಚಿಸಿದ್ದಾರೆ.
ಜೊತೆಗೆ ಮೋದಿ ಮೋದಿ ಎಂಬ ಘೋಷಣೆ ಸದನದಲ್ಲಿ ಪ್ರತಿಧ್ವನಿಸಿತು. ಇದಾದ ನಂತರ ಮೋದಿಯವರ ಆಟೋಗ್ರಾಫ್ ಪಡೆಯಲು ಉಭಯ ಪಕ್ಷಗಳ ಸಂಸತ್ ಸದಸ್ಯರು ಮುಗಿಬಿದ್ದರು. ಜೊತೆಗೆ ಮೋದಿ ಜೊತೆ ಸೆಲ್ಫಿಗಾಗಿ ಸಂಸದರು, ಸಭಾಧ್ಯಕ್ಷರು ಯತ್ನಿಸಿದ್ದು ವಿಶೇಷವಾಗಿತ್ತು.
ಭಾಷಣದ ವೇಳೆ ಮೋದಿ ದೇಶದ ಪ್ರಜಾಸತಾತ್ಮಕ ಮೌಲ್ಯಗಳು, ಭಾರತ-ಅಮೆರಿಕದ ಸಂಬಂಧದ ಬಗ್ಗೆ ಮಾತನಾಡುವಾಗ ಅಮೆರಿಕದ ಸಂಸತ್ ಸದಸ್ಯರು ಮೋದಿ-ಮೋದಿ ಎಂದು ಹರ್ಷೋದ್ಘಾರ ಮಾಡಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಪ್ರಧಾನಿ ಉಗ್ರವಾದ, ಭಾರತದಲ್ಲಿ ಮುಸ್ಲಿಮರ ಪ್ರಜಾಸತ್ತಾತ್ಮಕ ಹಕ್ಕುಗಳು, ಟ್ರೇಡ್ ಯೂನಿಯನ್, ಭಾರತದಲ್ಲಿನ ರಾಜಕೀಯ ಪಕ್ಷಗಳು ಮತ್ತು ಭಾಷೆಗಳ ಬಗ್ಗೆ ಮಾತನಾಡಿದರು. ಭಾರತದಲ್ಲಿ ನಾನು ಸಾವಿರಾರು ಭಾಷಣ ಮಾಡಿರಬಹುದು. ಆದರೆ, ನಾವೆಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡುತ್ತಿರುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ ಬೆನ್ನಲ್ಲಿಯೇ ಇಡೀ ಸದನದಲ್ಲಿ ಕರತಾಡನ ಮೊಳಗಿತು.
ಉಗ್ರವಾದದ ವಿರುದ್ಧ ಗುಡುಗಿದ ‘ನಮೋ‘
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ನೆಲದಿಂದಲೇ ಉಗ್ರವಾದದ ವಿರುದ್ಧ ಗುಡುಗಿದ್ದಾರೆ. ಯುಎಸ್ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ನಮೋ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವವರ ವಿರುದ್ಧ ಕಠಿಣ ಕ್ರಮದ ಅವಶ್ಯಕತೆ ಇದೆ ಎನ್ನುವ ಮೂಲಕ ಪಾಕಿಸ್ತಾನಕ್ಕೆ ನಮೋ ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲದೆ ಉಗ್ರವಾದ ಮಾನವೀಯತೆಯ ಶತೃ ಅಂತಾನೂ ಮೋದಿ ವ್ಯಾಖ್ಯಾನಿಸಿದ್ದಾರೆ.
ಕುತಂತ್ರಿ ಚೀನಾಗೂ ಎಚ್ಚರಿಕೆ ಸಂದೇಶ
ಇದೇ ವೇಳೆ ಪದೇ ಪದೆ ಭಾರತದ ಮೇಲೆ ಗಡಿ ಕ್ಯಾತೆ ತೆಗೆಯುತ್ತಿರುವ ಕುತಂತ್ರಿ ಚೀನಾಗೂ ಮೋದಿ ಮರ್ಮಾಘಾತ ಕೊಡುವ ಪ್ರಯತ್ನ ಮಾಡಿದ್ದಾರೆ. ಅಮೆರಿಕ ಜೊತೆಗೆ ಹಲವು ಮಹತ್ವದ ತಾಂತ್ರಿಕ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇದು ಚೀನಾಗೆ ಭಾರೀ ಆತಂಕ ತರಿಸಿದೆ.
ಒಟ್ಟಾರೆ, ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಬೈಡನ್ ಜೊತೆಗೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಭಾರತದ ಶತ್ರುರಾಷ್ಟ್ರಗಳಿಗೆ ದಿಟ್ಟ ಉತ್ತರ ಕೊಟ್ಟಿದ್ದಾರೆ.