ಬೆಂಗಳೂರು : ಗೃಹಲಕ್ಷ್ಮೀ ಯನ್ನು ನಾನೇ ಸ್ವಲ್ಪ ಹೋಲ್ಡ್ ಮಾಡಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಗೃಹಲಕ್ಷ್ಮೀ ಯೋಜನೆ ವಿಳಂಬ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನೇ ಮುಖ್ಯಮಂತ್ರಿ ಸಿದ್ದರಾಮಯ್ಯರ ಜೊತೆ ಮಾತಾಡಿ ಹೋಲ್ಡ್ ಮಾಡಿಸಿದ್ದೇನೆ ಎಂದು ತಿಳಿಸಿದರು.
ಗಲಾಟೆ ಕಡಿಮೆ ಮಾಡಲು ಈ ರೀತಿಯಲ್ಲಿ ಮಾಡುತ್ತಿದ್ದೇನೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಇರಲಿಲ್ಲ. ಅವರ ಜೊತೆ ಇವತ್ತು ಒಂದು ಸಭೆ ಮಾಡುತ್ತೇನೆ. ಸರಳತೆ ಮೂಲಕ ಯೋಜನೆ ಅನುಷ್ಠಾನ ಮಾಡುತ್ತೇವೆ. ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಹಾಕಬೇಕು. ಆ ರೀತಿಯಲ್ಲಿ ಯೋಜನೆ ಜಾರಿಗೆ ತರುತ್ತೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಆಗಸ್ಟ್ 18ರಂದು ಗೃಹಲಕ್ಷ್ಮೀಯರ ಖಾತೆಗೆ 2000 ರೂ. : ಲಕ್ಷ್ಮಿ ಹೆಬ್ಬಾಳ್ಕರ್
ಲಂಚ ಪಡೆದ್ರೆ ಏಜೆನ್ಸಿ ಕ್ಯಾನ್ಸಲ್
ಭ್ರಷ್ಟಾಚಾರ ರಹಿತ ಯೋಜನೆಯನ್ನು ಅನುಷ್ಠಾನ ಮಾಡುತ್ತೇವೆ. ಅಪ್ಲಿಕೇಶನ್ ಫ್ರೀಯಾಗಿ ಮಾಡಿಕೊಡಬೇಕು. ಯಾರಾದರೂ ಸಂಘ-ಸಂಸ್ಥೆಗಳು ಹಣ ವಸೂಲಿ ಮಾಡಿದ್ರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 200 ರಿಂದ 500 ರೂ. ಹಣ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಅದು ಗೊತ್ತಾದ್ರೆ ಏಜೆನ್ಸಿ ಕೂಡ ಕ್ಯಾನ್ಸಲ್ ಮಾಡ್ತೀವಿ ಎಂದು ಖಡಕ್ ಎಚ್ಚರಿಕೆ ನೀಡಿದರು.
ನಾವು ಜಾರಿಗೆ ತಂದಿರುವ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಯಾರು ಕೂಡ ಒಬ್ಬರಿಗೆ ಒಂದು ರೂಪಾಯಿ ಲಂಚ ಕೊಡಬಾರದು. ಲಂಚ ಕೇಳಿದರೆ ನಾವು ಒಂದು ಹೆಲ್ಪ್ ಲೈನ್ ನಂಬರ್ ಕೊಡ್ತೀವಿ. ಅದಕ್ಕೆ ಕರೆ ಮಾಡಿ ದೂರು ನೀಡಲಿ ಎಂದು ಡಿ.ಕೆ ಶಿವಕುಮಾರ್ ಹೇಳಿದರು.