ಕಾರವಾರ : ಪಾರ್ಲೆ-ಜಿ ಬಿಸ್ಕತ್ತುಗಳ ಜೊತೆ ಅಕ್ರಮವಾಗಿ ಸಾಗಿಸುತ್ತಿದ್ದ 2,520 ಲೀಟರ್ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಅಬಕಾರಿ ಚೆಕ್ ಪೊಸ್ಟ್ ಬಳಿ ಘಟನೆ ನಡೆದಿದೆ. ತೆಲಂಗಾಣ ಮೂಲದ ಲಾರಿ ಚಾಲಕ ಕೊತ್ತಪಲ್ಲಿ ನಾಗಾಚಾರಿ ಎಂಬಾತನನ್ನು ಬಂಧಿಸಲಾಗಿದೆ.
ಪಾರ್ಲೆ-ಜಿ ಬಿಸ್ಕತ್ ತುಂಬಿದ ಲಾರಿಯಲ್ಲಿ ಗೋವಾದಿಂದ ಅಕ್ರಮ ಮದ್ಯವನ್ನ ತುಂಬಿಕೊಂಡು ಹೈದರಾಬಾದ್ ಗೆ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ರಾಮನಗರ ಪೊಲೀಸರು ದಾಳಿ ನಡೆಸಿ 32,06,400 ರೂ. ಮೌಲ್ಯದ ಅಕ್ರಮ ಮದ್ಯ, TS-05 GE-8845 ನೋಂದಾಯಿತ ಅಶೋಕ್ ಲೇಲ್ಯಾಂಡ್ ಮಿನಿ ಲಾರಿ ವಶ ಪಡೆದಿದ್ದಾರೆ.
2 ಲಕ್ಷ ರೂ. ಮೌಲ್ಯದ ಪಾರ್ಲೆ-ಜಿ ಬಿಸ್ಕತ್ ಜೊತೆಗೆ 750 ಎಂಎಲ್(ML)ನ 24 ಬಾಟ್ಲಿಗಳಂತೆ 10 ಬಾಕ್ಸ್ ಗಳಲ್ಲಿ 240 ರೋಯಲ್ ಸ್ಟ್ಯಾಗ್ ವಿಸ್ಕಿ, 750 ಎಂಎಲ್(ML)ನ 24 ಬಾಟ್ಲಿಗಳಂತೆ 130 ಬಾಕ್ಸ್ ಗಳಲ್ಲಿ 3120 Mansion House ಫ್ರೆಂಚ್ ಬ್ರಾಂಡಿ ಬಾಟಲ್ ಸೇರಿದಂತೆ ಒಟ್ಟು 32,06,400ರೂ. ಮೌಲ್ಯದ 2,520 ಲೀಟರ್ ಮದ್ಯ ಹಾಗೂ 20 ಲಕ್ಷ ರೂ. ಮೌಲ್ಯದ ಮಿನಿ ಲಾರಿ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.