ಬೆಂಗಳೂರು: 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಇಂದು (ಜೂನ್ 21, 2023)ರಂದು ವಿಧಾನಸೌಧದಲ್ಲಿ ಗಣ್ಯರು ಯೋಗಾಸನ ಮಾಡುವ ಮೂಲಕ ಗಮನ ಸೆಳೆದರು.
ಹೌದು. ವಿಧಾನಸೌಧ ಗ್ರಾಂಡ್ ಸ್ಟಪ್ ಮುಂಭಾಗದಲ್ಲಿ ಆಯುಷ್ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್, ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಭಾರತ ತಂಡ ಮಾಜಿ ಕ್ರಿಕೆಟಿಗ ವಿ.ಕೆ ವೆಂಕಟೇಶ್ ಪ್ರಸಾದ್, ಅಂಜು ಬಾಬಿ ಜಾರ್ಜ್, ನಟಿ ಭಾವನಾ ಭಾಗಿಯಾಗಿದ್ದರು.
ಇನ್ನು ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ಯೋಗ ಪ್ರಾಚೀನ ಕಾಲದಲ್ಲೇ ಇತ್ತು. ಯೋಗ ಮನಸ್ಸು ಹಾಗೂ ಶರೀರವನ್ನು ಸಮತೋಲನದಲ್ಲಿ ಇಡಲು ಅನುಕೂಲಕಾರಿಯಾಗಿದೆ ಎಂದರು.
ಸ್ವೀಕರ್ ಯು.ಟಿ ಖಾದರ್ ಮಾತನಾಡಿ, ದೇಶದ ಋಷಿಮುಣಿಗಳು ವಿಶ್ವಕ್ಕೆ ಕೊಟ್ಟ ಕೊಡುಗೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು. ಒತ್ತಡ ಬಹುದೊಡ್ಡ ಸಮಸ್ಯೆ, ಅದಕ್ಕೆ ಮದ್ದಿಲ್ಲ. ಯೋಗಾಭ್ಯಾಸ ಪ್ರತಿಯೊಬ್ಬರಿಗೆ ಅಗತ್ಯವಾಗಿದೆ.
ದ್ವೇಷ ಮುಕ್ತ, ದುಷ್ಟಟ ಮುಕ್ತ ಸಮಾಜಕ್ಕೆ ಯೋಗಾಭ್ಯಾಸ ಅಗತ್ಯವಾಗಿದೆ. ಇವತ್ತು ಪವರ್ ಯೋಗ ಸೇರಿದಂತೆ ಭಿನ್ನ ಯೋಗಾಭ್ಯಾಸ ಇದೆ. ಆದರೆ ಯೋಗಕ್ಕೆ ಪಠ್ಯಕ್ರಮ ಮಾಡಬೇಕು ಎಂದು ಮನವಿ ಮಾಡಿದರು.
ಶಾಸಕರಾದ ರಿಜ್ವಾನ್ ಹರ್ಷದ್ ಮಾತನಾಡಿ, ಯೋಗ ತಮ್ಮ ಪರಂಪರೆ ಹಾಗೂ ಸಂಸ್ಕೃತಿಯ ಭಾಗವಾಗಿದೆ. ಯೋಗ ನಮ್ಮಿಂದ ಇಡೀ ಪ್ರಪಂಚಕ್ಕೆ ಬೆಳಗಾಗಿ ಹರಿದಿದೆ ಎಂಬುದು ಹೆಮ್ಮೆ. ಯೋಗ ಅಂದರೆ ಕೇವಲ ದೇಹದ ಆರೋಗ್ಯ ಅಲ್ಲ, ಮಾನಸೀಕ ಆರೋಗ್ಯಕ್ಕೂ ಅನುಕೂಲವಾಗಿದೆ ಎಂದರು.