ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪುಕ್ಕಲತನ, ಉದಾರ ಮನಸ್ಸು ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಕುಹಕವಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿದ್ದರಾಮಯ್ಯಗೆ ತಾವೇ ಪೂರ್ಣವಧಿ ಸಿಎಂ ಅಂತ ನೇರವಾಗಿ ಹೇಳುವ ಧೈರ್ಯವಿಲ್ಲ. ಅವರಿಗೆ ಪುಕ್ಕಲತನ ಎಂದು ಕುಟುಕಿದ್ದಾರೆ.
ಸಚಿವ ಡಾ.ಹೆಚ್.ಸಿ ಮಹದೇವಪ್ಪ, ಎಂ.ಬಿ ಪಾಟೀಲ್ ಇಬ್ಬರು ಐದು ವರ್ಷವೂ ಸಿದ್ದರಾಮಯ್ಯ ಸಿಎಂ ಅಂತ ಹೇಳಿದ್ದಾರೆ. ಸಿದ್ದರಾಮಯ್ಯರಿಗೆ ಅಧಿಕಾರ ಬಿಟ್ಟು ಕೊಡುವ ಇರಾದೆ ಇಲ್ಲ. ಸಿದ್ದರಾಮಯ್ಯ ತಮ್ಮ ಚೇಲಾ ಪಡೆ ಮೂಲಕ ತಾವೂ ಪೂರ್ಣ ಅವಧಿಗೆ ಸಿಎಂ ಅಂತ ಹೇಳಿಸುತ್ತಿದ್ದಾರೆ ಎಂದು ಛೇಡಿಸಿದ್ದಾರೆ.
ಇದನ್ನೂ ಓದಿ : ಒಬ್ಬ ಕಳ್ಳ, ಮತ್ತೊಬ್ಬ ಮಳ್ಳ.. ಇಂಥವರನ್ನು ಹಿಂದೆ ನೋಡಿರಲಿಲ್ಲ : ಕೆ.ಎಸ್ ಈಶ್ವರಪ್ಪ
ಚುನಾವಣೆ ಗೆಲ್ಲಲು ಡಿಕೆಶಿ ಪಾತ್ರ ದೊಡ್ಡದು
ವಿಧಾನಸಭಾ ಚುನಾವಣೆ ಗೆಲುವಿನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಪಾತ್ರ ದೊಡ್ಡದಿದೆ. ಕಾಂಗ್ರೆಸ್ ಧಾರಾಳ ಮನಸ್ಸಿನಿಂದ ಸಿದ್ದರಾಮಯ್ಯ ಅವರನ್ನು ಎರಡನೇ ಬಾರಿ ಸಿಎಂ ಮಾಡಿದೆ. ಆದರೆ, ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ದರಾಮಯ್ಯಗೆ ಆ ಧಾರಾಳ, ಉದಾರತನದ ಮನಸ್ಸು ಇಲ್ಲ ಎಂದು ಪ್ರತಾಪ್ ಸಿಂಹ ಟಕ್ಕರ್ ಕೊಟ್ಟಿದ್ದಾರೆ.
ಯತ್ನಾಳ್ ಅಂದ್ರೆ ಒಂದು ಹವಾ ಇದೆ
ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತು ಪ್ರತಿಕ್ರಿಯಿಸಿರುವ ಅವರು, ಶೀಘ್ರವೇ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುತ್ತದೆ. ಎದೆಗಾರಿಕೆ ಇರೋ ನಾಯಕ ಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಎಲ್ಲಾ ಕಡೆಯೂ ಕೇಳಿ ಬರುತ್ತಿದೆ. ರಾಷ್ಟ್ರೀಯತೆ, ಹಿಂದುತ್ವ ಎಲ್ಲವನ್ನೂ ಯತ್ನಾಳ್ ಗಟ್ಟಿಯಾಗಿ ಪ್ರತಿಪಾದಿಸುತ್ತಾರೆ. ಯತ್ನಾಳ್ ಅಂದರೆ ಒಂದು ಹವಾ ಇದೆ ಎಂದು ಯತ್ನಾಳ್ ಪರ ಬ್ಯಾಟ್ ಬೀಸಿದ್ದಾರೆ.