Saturday, December 21, 2024

ಕೊಡಗಿನ ಬೆಡಗು ಸವಿಯೋರಿಗೆ ಥ್ರಿಲ್ ನೀಡುತ್ತೆ ಈ ಗ್ಲಾಸ್ ಸ್ಕೈವಾಕ್

ಹೆಜ್ಜೆ ಇಟ್ಟರೆ ಸಾಕು ಎದೆ ಒಂದು ಕ್ಷಣ ಝಲ್ ಎನಿಸುವಂತಹ ಅನುಭವ. ಗಾಳಿಯಲ್ಲಿ ನಡೆಯುತ್ತಿದ್ದೇವೇನೋ ಎಂದೆನಿಸುವಷ್ಟು ಥ್ರಿಲ್. ಇದು ಯಾವುದೋ ವಿದೇಶದ ದೃಶ್ಯವಲ್ಲ.ಇಂತಹ ಒಂದು ಥ್ರಿಲ್ಲಿಂಗ್ ಪ್ರವಾಸಿತಾಣ ಇರೋದು ನಮ್ಮ ಮಡಿಕೇರಿಯಲ್ಲಿ.

ಹೌದು, ಪ್ರವಾಸಿಗರ ಹಾಟ್​ಸ್ಪಾಟ್​ ಕೊಡಗು ಜಿಲ್ಲೆಗೆ ಮತ್ತೊಂದು ಪ್ರವಾಸಿ ತಾಣ ಸೇರ್ಪಡೆಯಾಗಿದ್ದು, ಕೊಡಗಿನಲ್ಲಿ ನೂತನವಾಗಿ ಗ್ಲಾಸ್‌ ಸ್ಕೈವಾಕ್ ಬ್ರಿಡ್ಜ್ ನಿರ್ಮಾಣವಾಗಿದೆ. ಮಡಿಕೇರಿ – ತಲಕಾವೇರಿ ಮಾರ್ಗದ ಉಡೋತ್ ಮೊಟ್ಟೆಯಲ್ಲಿರುವ ಪಪ್ಪಿಸ್ ಪ್ಲಾಂಟೇಷನ್ ನಲ್ಲಿ ಈ ಸ್ಕೈವಾಕ್ ಬ್ರಿಡ್ಜ್​ಅನ್ನು ನಿರ್ಮಿಸಲಾಗಿದೆ. ಇದು ದಕ್ಷಿಣದ ಭಾರತದ ಎರಡನೇ ಗಾಜಿನ ಸೇತುವೆ ಆಗಿದೆ. ಕೇರಳದ ವಯನಾಡಿನಲ್ಲಿ ಇದೇ ರೀತಿಯ ಗಾಜಿನ ಸೇತುವೆ ಇದೆ. ಆದ್ರೆ ಅದು ಸಣ್ಣದಾದ ಸೇತುವೆಯಾಗಿದೆ.

ಕರ್ನಾಟಕದ ಮೊದಲ 32 ಮೀ. ಉದ್ದದ ಗಾಜಿನ ಸೇತುವೆ 

ಕೊಡಗಿನಲ್ಲಿ ನಿರ್ಮಿಸಿರುವ ಗಾಜಿನ ಸೇತುವೆಯು 32 ಮೀಟರ್ ಉದ್ದ ಇದೆ. 2 ಮೀಟರ್ ಅಗಲದ 78 ಅಡಿ ಎತ್ತರದಲ್ಲಿರುವ ಗ್ಲಾಸ್ ಸ್ಕೈವಾಕ್ ಬ್ರಿಡ್ಜ್ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಸುಮಾರು 5 ಟನ್ ಭಾರ ಹೊರುವ ಸಾಮರ್ಥ್ಯ ಹೊಂದಿರುವ ಈ ಬ್ರಿಡ್ಜ್​ನಲ್ಲಿ ಒಮ್ಮೆಗೆ 40-50 ಮಂದಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದು. ಮುನ್ನೆಚ್ಚಾರಿಕ ಕ್ರಮವಾಗಿ 8 ರಿಂದ 9 ಮಂದಿಗಷ್ಟೇ ಇಲ್ಲಿ ಬಿಡಲಾಗುತ್ತಿದೆ. ಈ ಸೇತುವೆ ಮೇಲೆ ನಡೆಯಲು ಒಬ್ಬರಿಗೆ 200 ರೂ. ಶುಲ್ಕ ನಿಗದಿಪಡಿಸಲಾಗಿದೆ.

ದಕ್ಷಿಣ ಭಾರತದಲ್ಲಿ ಅತಿ ದೊಡ್ಡದಾದ ಗ್ಲಾಸ್ ಬ್ರಿಡ್ಜ್

ಹಚ್ಚ ಹಸುರಿನ ಪ್ರಕೃತಿ ನಡುವೆ ಈ ಗಾಜಿನ ಸೇತುವೆ ಮೇಲೆ ನಡೆಯುವುದು ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತಿದೆ. ಸುಂದರ ಪ್ರಕೃತಿ ಸೌಂದರ್ಯದ ಮೂಲಕ ಕೊಡಗು ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿದೆ. ಈ ಗ್ಲಾಸ್‌ ಸ್ಕೈವಾಕ್ ಬ್ರಿಡ್ಜ್ ಇಡೀ ದಕ್ಷಿಣ ಭಾರತದ ಗಮನ ಸೆಳೆಯುತ್ತಿದೆ. ದಕ್ಷಿಣ ಭಾರತದಲ್ಲಿ ಇಷ್ಟು ದೊಡ್ಡದಾದ ಗ್ಲಾಸ್ ಬ್ರಿಡ್ಜ್​​​ ಅಂದರೆ ಇದೇ ಆಗಿದೆ. ಒಟ್ಟು 40 ಲಕ್ಷ ರೂ ವೆಚ್ಚದಲ್ಲಿ ಈ ಅದ್ಭುತವಾದ ಗ್ಲಾಸ್ ಬಿಡ್ಜ್ ನಿರ್ಮಿಸಿದ್ದಾರೆ​ ಮಾಲಿಕ ವಸಂತ್.

ವ್ಯೂ ಪಾಯಿಂಟ್​ನಲ್ಲಿ ನಿಂತು ಇಡೀ ಕೊಡಗಿನ ಸೌಂದರ್ಯ ಸವಿಯಬಹುದು. ಒಂದೆಡೆ ಬೆಟ್ಟದ ಮೇಲೆ ಮಡಿಕೇರಿಯ ಸೌಂದರ್ಯ ಕಾಣಿಸುತ್ತದೆ. ಕಾಫಿ ತೋಟದ ಮಧ್ಯೆ  ಈ ಗ್ಲಾಸ್​ ಸ್ಕೈವಾಕ್​ ನಿರ್ಮಿಸಲಾಗಿದ್ದು ಕಣ್ಣು ಹಾಯಿಸಿದಷ್ಟು ದೂರವೂ ಪ್ರಕೃತಿಯ ಸೊಬಗು ಪ್ರವಾಸಿಗರ ಕಣ್ಮನ ಸೆಳೆಯುತ್ತದೆ.

ಮಡಿಕೇರಿಯಿಂದ ತಲಕಾವೇರಿಗೆ ಹೋಗುವ ಮಾರ್ಗದಲ್ಲಿ ಏಳು ಕಿ.ಮಿ ದೂರದಲ್ಲಿರುವ ಉಡೋತ್‌ ಮೊಟ್ಟೆಯಲ್ಲಿ ಸ್ವಂತ ವಾಹನದಲ್ಲಿ ಹೋಗಬಹುದು. ತಲಕಾವೇರಿಗೆ ಹೋಗುವ ಬಸ್‌ನಲ್ಲೂ ತೆರಳಬಹುದು.

ದಕ್ಷಿಣ ಭಾರತದ ಮೊದಲ ಗ್ಲಾಸ್‌ ಸ್ಕೈ ವಾಕ್‌ ಬ್ರಿಡ್ಜ್‌  ಕೇರಳದಲ್ಲಿದೆ. ಇಲ್ಲಿನ ವಯನಾಡಿನ ತೊಲ್ಲಾಯಿರಂ ಕಂಡಿಯಲ್ಲಿ ಈ ಬ್ರಿಡ್ಜ್‌ ನಿರ್ಮಾಣವಾಗಿದೆ. ಇನ್ನು ಭಾರತದಲ್ಲಿ ಮೊದಲ  ಗ್ಲಾಸ್‌ ಸ್ಕೈ ವಾಕ್‌ ಬ್ರಿಡ್ಜ್‌ ನಿರ್ಮಾಣಗೊಂಡಿದ್ದು, ಸಿಕ್ಕಿಂನ ಪೆಲ್ಲಿಂಗ್‌ನಲ್ಲಿ. ಇದು ಸಿಕ್ಕಿಂನ ನಾಲ್ಕನೇ ಅತಿ ಎತ್ತರದ ಪ್ರತಿಮೆಯಾಗಿದೆ. ಭಾರತದ ಎರಡನೇ ಗಾಜಿನ ಸೇತುವೆಯು ಬಿಹಾರದ ರಾಜ್‌ಗಿರ್‌ನಲ್ಲಿದೆ.

  • ಲೀನಶ್ರೀ ಪೂಜಾರಿ

RELATED ARTICLES

Related Articles

TRENDING ARTICLES