ಕಲಬುರಗಿ : ಮರಳು ದಂದೆಕೋರರಿಂದ ಹೆಡ್ ಕಾನ್ಸ್ಟೇಬಲ್ ಹತ್ಯೆ ಪ್ರಕರಣ ಸಂಬಂಧ ಕರ್ತವ್ಯ ನಿರ್ಲಕ್ಷ ಹಿನ್ನೆಲೆ ಸಿಪಿಐ (CPI), ಪಿಎಸ್ಐ (PSI) ಸೇರಿದಂತೆ ಮೂವರು ಪೊಲೀಸರನ್ನ ಅಮಾನತು ಮಾಡಲಾಗಿದೆ.
ಜೇವರ್ಗಿ ಠಾಣೆ ಸಿಪಿಐ ಭೀಮನಗೌಡ್ ಬಿರಾದರ್, ನೆಲೋಗಿ ಠಾಣೆಯ ಪಿಎಸ್ಐ ಗೌತಮ್ ಮತ್ತು ಕಾನ್ಸ್ಟೇಬಲ್ ರಾಜಶೇಖರ ಅವರನ್ನು ಅಮಾನತು ಮಾಡಲಾಗಿದೆ. ಅಮಾನತ್ತು ಮಾಡಿ ಕಲಬುರಗಿ ಎಸ್ಪಿ ಇಶಾ ಪಂತ್ ಆದೇಶ ಹೊರಡಿಸಿದ್ದಾರೆ.
ಜೂನ್ 15ರಂದು ನೆಲೋಗಿ ಠಾಣೆ ಹೆಡ್ ಕಾನ್ಸ್ಟೇಬಲ್ ಮೈಸೂರ್ ಜೌಹಾನ್ ಹತ್ಯೆಯಾಗಿತ್ತು. ಮರಳು ದಂದೆಕೋರರು ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿದ್ದರು. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ಹತ್ಯೆ ಮಾಡಿದ್ದರು.
ಇದನ್ನೂ ಓದಿ : ಸಿಪಿಐ ಲಿಂಗರಾಜ್ ಹೃದಯಾಘಾತದಿಂದ ನಿಧನ
ಆರೋಪಿ ಕಾಲಿಗೆ ಗುಂಡು
ಹೆಡ್ಕಾನ್ಸ್ಟೇಬಲ್ ರನ್ನು ಹತ್ಯೆಗೈದ ಪ್ರಕರಣದಲ್ಲಿ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ಟ್ರ್ಯಾಕ್ಟರ್ ಮಾಲೀಕ ಸಾಯಿಬಣ್ಣ ಕರ್ಜಗಿ ಕಾಲಿಗೆ ಪೊಲೀಸರು ಗುಂಡಿಟ್ಟಿದ್ದಾರೆ. ಹತ್ಯೆ ಮಾಡಿ ತೆಲೆ ಮರೆಸಿಕೊಂಡಿದ್ದ ಟ್ರ್ಯಾಕ್ಟರ್ ಮಾಲೀಕ ಸಾಯಿಬಣ್ಣಾ ಕರ್ಜಗಿಯನ್ನು ವಿಜಯಪುರದಲ್ಲಿ ಪೊಲೀಸರು ಬಂಧಿಸಿದ್ದರು.
ವಿಜಯಪುರದಿಂದ ಕಲಬುರಗಿಗೆ ಕಡೆ ತರುತ್ತಿದ್ದ ವೇಳೆಯಲ್ಲಿ ಜೇವರ್ಗಿ ತಾಲೂಕಿನ ಮಂದೇವಾಲ ಹಾಗೂ ಜೇರಟಗಿ ನಡುವೆ ಮೂತ್ರ ವಿಸರ್ಜನೆ ಮಾಡಬೇಕು ಅಂತ ಆರೋಪಿ ಹೇಳಿದ್ದಾನೆ. ಮೂತ್ರ ವಿಸರ್ಜನೆ ನೆಪದಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿಯನ್ನು ವಶಕ್ಕೆ ಪಡೆಯಲು ಮುಂದಾದ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.