ಬೆಂಗಳೂರು : ಅಕ್ಕಿ ಯಾಕ್ರೀ ಕೊಡಲ್ಲ ನಮಗೆ, ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇರೋದು. ಅಕ್ಕಿ ಕೊಡಲ್ಲ ಅಂದ್ರೆ ಒಕ್ಕೂಟ ವ್ಯವಸ್ಥೆಯಿಂದ ಕಿತ್ತಾಕಲಿ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಕೆಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕರ್ನಾಟಕವನ್ನು ಒಕ್ಕೂಟ ವ್ಯವಸ್ಥೆಯಿಂದ ಕಿತ್ತಾಕಲಿ. ಆಮೇಲೆ ನಾವು ತೋರಿಸ್ತೀವಿ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಕ್ಷೇಮಾಭಿವೃದ್ಧಿಗೆ ಸ್ಪಂದಿಸುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು. ನಮ್ಮಿಂದ ತೆರಿಗೆ ತೆಗೆದುಕೊಳ್ಳಲ್ವಾ? ಹಾಗಾದ್ರೆ, ನಮ್ಮ ತರಿಗೆ ವಾಪಸ್ ಕೊಡಿ ನೋಡೋಣ. ರಾತ್ರಿ ಅಕ್ಕಿ ಕೊಡ್ತೀನಿ ಅಂತ ಹೇಳಿ, ಬೆಳಗ್ಗೆ ಅಕ್ಕಿ ಇಲ್ಲ ಅಂದ್ರೆ ಹೇಗೆ? ಫುಡ್ ಸೆಕ್ಯುರಿಟಿ ಆ್ಯಕ್ಟ್ ತಂದಿದ್ದು ಯಾಕೆ? ಅದನ್ನು ತಂದಿದ್ದು ನಮ್ಮ ಮನಮೋಹನ್ ಸಿಂಗ್. ಯಾರು ಹಸಿವಿನಿಂದ ಇರಬಾರದು ಅಂತ ಮನಮೋಹನ್ ಸಿಂಗ್ ತಂದಿರುವ ಫುಡ್ ಆ್ಯಕ್ಟ್ ಇದು ಎಂದು ಹೇಳಿದ್ದಾರೆ.
ಮಲತಾಯಿ ಧೋರಣೆ ಸರಿಯಲ್ಲ
7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಇದೆ. ಆದರೂ ಈಗ ಅಕ್ಕಿ ಇಲ್ಲ ಅಂತೀರಾ. ಹಾಗಾದ್ರೆ, ತನಿಖೆ ಮಾಡಿಸ್ತಾರಾ ಇವರು? ನಾವು ಹಣ ಕೊಡ್ತೀವಿ, ಅಕ್ಕಿ ಕೊಡಿ ಪುಕ್ಕಟ್ಟೆ ಕೇಳಿಲ್ಲ. ಇಲ್ಲ ಅಂದ್ರೆ ಪಾರ್ಲಿಮೆಂಟ್ ಎಲೆಕ್ಷನ್ ನಲ್ಲಿ ಎದುರಿಸಬೇಕಾಗುತ್ತೆ. ನಾವು ಯಾವುದೇ ಕಾರಣದಿಂದಾಗಿ 10 ಕಿಲೋ ಅಕ್ಕಿ ಕೊಟ್ಟೆ ಕೊಡ್ತೀವಿ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಸರಿಯಲ್ಲ ಎಂದು ಗುಡುಗಿದ್ದಾರೆ.
ಇದನ್ನೂ ಓದಿ : ಇದು ಸಿದ್ದರಾಮಯ್ಯನವರ Conversion ಭಾಗ್ಯ : ಬಿಜೆಪಿ ಶಾಸಕ ಯತ್ನಾಳ್
GST ನಾವ್ಯಾಕೆ ಒಪ್ಪಿಕೊಳ್ಳಬೇಕು?
ನೀವು ತಂದಿರುವ ಜಿಎಸ್ ಟಿ(GST) ನಾವ್ಯಾಕೆ ಒಪ್ಪಿಕೊಳ್ಳಬೇಕು? ನಮ್ಮ ಪಾಲಿನ ಜಿಎಸ್ ಟಿ(GST) ಹಣ ನಮಗೆ ವಾಪಸ್ ಕೊಡಿ. ಅನ್ನಭಾಗ್ಯ ಇದು ಜನಪರ ಕಾರ್ಯಕ್ರಮ. ಇದರಲ್ಲಿ ರಾಜಕೀಯ ಮಾಡಿದ್ರೆ, ಪಾರ್ಲಿಮೆಂಟ್ ಚುನಾವಣೆಯಲ್ಲಿ ಅನುಭವಿಸಬೇಕಾಗುತ್ತದೆ. FCI ಇರೋದ್ರಿಂದಲೇ ನಾವು ಅಕ್ಕಿ ಕೊಡ್ತೀವ ಅಂತ ಘೋಷಣೆ ಮಾಡಿದ್ದು. ಅದಕ್ಕೆ ಅದರಲ್ಲಿ ನಿಗದಿ ಮಾಡಿದ ದರದಲ್ಲೇ ಅಕ್ಕಿ ಕೊಡಿ ಅಂತ ಕೇಳ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಿಮಗೆ ತಾಕತ್ ಇದ್ರೆ ತೆಗೆದುಹಾಕಿ
ಪುಕ್ಕಟ್ಟೆ ಕೊಡಿ ಅಂತ ನಾವೇನು ಕೇಳಿಲ್ಲ. ಕೆಲವೊಂದು ತಾಂತ್ರಿಕ ತಪ್ಪಾಗಿದ್ದರೆ ಒಪ್ಪಿಕೊಳ್ಳುತ್ತೇವೆ. ಹಾಗಂತ ನೀವು ಅಕ್ಕಿ ಇಲ್ಲ ಅಂದ್ರೆ ಹೇಗೆ? ಹಾಗಾದ್ರೆ, ನಿಮ್ಮ ಒಕ್ಕೂಟ ವ್ಯವಸ್ಥೆಯಿಂದ ಕರ್ನಾಟಕ ರಾಜ್ಯವನ್ನು ತೆಗೆದು ಹಾಕಿ ನೋಡೋಣ. ನಿಮಗೆ ತಾಕತ್ ಇದ್ದರೆ ದೇಶಗಳಲ್ಲಿನ ಒಕ್ಕೂಟ ವ್ಯವಸ್ಥೆಯಲ್ಲಿರುವ ಕರ್ನಾಟಕ ರಾಜ್ಯವನ್ನು ತೆಗೆದುಹಾಕಿ. ಇಲ್ಲ ಅಂದ್ರೆ ನಾವು ನಿಮ್ಮ GST ಒಪ್ಪಲ್ಲ. ಅಕ್ಕಿಯಲ್ಲಿ ಯಾಕೆ ರಾಜಕೀಯ ಮಾಡ್ತೀರಾ? ನೀವು ಇದನ್ನು ಒಪ್ಪಿಕೊಳ್ತೀರಾ? ಎಂದು ಆಕ್ರೋಶ ಹೊರಹಾಕಿದ್ದಾರೆ.