Thursday, December 19, 2024

ನಮ್ಮ ಅನ್ನಭಾಗ್ಯ ಯೋಜನೆ ಹಾಳು ಮಾಡಲು ಕೇಂದ್ರ ಪ್ರಯತ್ನಿಸಿದೆ : ಸಿದ್ದರಾಮಯ್ಯ

ಬೆಂಗಳೂರು : 7 ಲಕ್ಷ ಟನ್ ಅಕ್ಕಿ ಸರ್ಕಾರದ ಬಳಿ ಇದ್ದರೂ, ನಮ್ಮ ಯೋಜನೆ ಹಾಳು ಮಾಡಲು ಕೇಂದ್ರ ಪ್ರಯತ್ನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಇದು ದ್ವೇಷದ ರಾಜಕಾರಣ. ಇದಕ್ಕೇನಾದರೂ ತೊಂದರೆಯಾದ್ರೆ ಅದಕ್ಕೆ ಕೇಂದ್ರವೇ ಕಾರಣ. ಕೇಂದ್ರ ಸರ್ಕಾರ ರಾಜಕೀಯ ತೀರ್ಮಾನ ಮಾಡಿ ಅಕ್ಕಿ ತಡೆಯುವ ಪ್ರಯತ್ನ ನಡೆಸುತ್ತಿದೆ. ಕೇಂದ್ರ ಸರ್ಕಾರ ಇದರಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ.

ಡೆಪ್ಯುಟಿ ಮ್ಯಾನೇಜರ್​ 7 ಲಕ್ಷ ಟನ್​ ಅಕ್ಕಿ ಸಂಗ್ರಹ ಇದೆ ಅಂತ ಹೇಳಿದ್ದರು. ಅಕ್ಕಿ ಸಂಗ್ರಹ ಇದ್ದರೂ ಕೇಂದ್ರ ಯಾಕೆ ಪೂರೈಕೆ ಮಾಡುತ್ತಿಲ್ಲ? ಬಿಜೆಪಿ ಪಕ್ಷ ಬಡವರ ವಿರೋಧಿ. ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಮಾಡುತ್ತಿದ್ದಾರೆ. ಅಕ್ಕಿ ಪೂರೈಸಲು ಛತ್ತೀಸ್​ಗಢ ಸರ್ಕಾರಕ್ಕೂ ಮನವಿ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಛತ್ತೀಸ್​ಗಡ, ತೆಲಂಗಾಣ, ಆಂಧ್ರ, ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುತ್ತಿದೆ. ಇವರನ್ನು ಬಡವರ ವಿರೋಧಿಗಳು ಅಂತ ಕರೆಯಬೇಕಾ ಎಂದು ಹೇಳಿ ರಾಜಕೀಯ ಮಾಡಿದ್ದಾರೆ. ನಾಳೆ ಸಚಿವ ಮುನಿಯಪ್ಪ ಅವರನ್ನು ತೆಲಂಗಾಣಕ್ಕೆ ಕಳಿಸುತ್ತಿದ್ದೇವೆ. ಈಗಾಗಲೇ ಒಂದು ಗ್ಯಾರೆಂಟಿ ಜಾರಿ ಮಾಡಲಾಗಿದೆ. ಇನ್ನು ಉಳಿದಂತೆ ಅಂತ್ಯೋದಯ ಕಾರ್ಡ್ ಅವರಿಗೆ ಪ್ರತಿ ತಿಂಗಳು 10 ಕಿಲೋ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಪರ್ಸಂಟೇಜ್ ಡೀಲ್​ಗಾಗಿ ಸಭೆ ಮಾಡಿರಬಹುದೇನೋ, ನನಗೆ ಗೊತ್ತಿಲ್ಲ : ಅಶ್ವತ್ಥನಾರಾಯಣ

ರಾಜ್ಯ ಸರ್ಕಾರಕ್ಕೆ ಹಣದ ಸಮಸ್ಯೆ ಇಲ್ಲ

ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ಮಾಡಿದರೂ ಅಕ್ಕಿ ವಿತರಿಸಲು ಪ್ರಯತ್ನ ಮಾಡುತ್ತೇವೆ. ಅಕ್ಕಿ ಕೊಡುವ ಬಗ್ಗೆ ತಮಿಳುನಾಡು ಸರ್ಕಾರ ಶೇ.100 ರಷ್ಟು ಭರವಸೆ ನೀಡಿಲ್ಲ. ಹೆಚ್ಚುವರಿ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರಕ್ಕೆ ಹಣದ ಸಮಸ್ಯೆ ಇಲ್ಲ. ಈ ಹಿಂದೆ ಅಕ್ಕಿ ಕೊಡುತ್ತಿರುವುದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಿಲೋ ಅಕ್ಕಿಗೆ 34 ರೂ. ಹಾಗೂ 2.60 ಪೈಸೆ ಟ್ರಾನ್ಸ್ ಪೋರ್ಟ್ ಚಾರ್ಜ್ ಆಗುತ್ತದೆ. ಅನ್ನಭಾಗ್ಯ ಯೋಜನೆಗಾಗಿ ತಿಂಗಳಿಗೆ 840 ಕೋಟಿ ವೆಚ್ಚ ಆಗಲಿದ್ದು, ಪ್ರತಿ ವರ್ಷಕ್ಕೆ 10,092 ಕೋಟಿ ಬೇಕು. ಹೀಗಾಗಿ, ಹೆಚ್ಚುವರಿ ಅಕ್ಕಿ ವಿತರಣೆ ಬಗ್ಗೆ ಎಫ್​ಸಿಐ (FCI) ಡೆಪ್ಯುಟಿ ಮ್ಯಾನೇಜರ್​ ಜೊತೆ ಚರ್ಚೆ ನಡೆಸಿದ್ದೆವು. ಈ ವೇಳೆ ಹೆಚ್ಚುವರಿ ಅಕ್ಕಿ ಕೊಡುವುದಾಗಿ ಸಚಿವ ​ ಮುನಿಯಪ್ಪ ಮತ್ತು ನಮ್ಮ ಜೊತೆ ಹೇಳಿದ್ದರು. ಜೂ.12ರಂದು ಪತ್ರವೂ ಬರೆದಿದ್ದರು. ಕೇಂದ್ರದ ಒಪ್ಪಿಗೆ ಆಧಾರದಲ್ಲಿ ಜುಲೈ 1ರಿಂದ ಅಕ್ಕಿ ಕೊಡುತ್ತೇವೆ ಎಂದಿದ್ದೆವು. ಈಗ ಕೇಂದ್ರ ಸರ್ಕಾರ ರಾಜಕೀಯ ಮಾಡ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES