ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದೆ. ರಸ್ತೆ ದಾಟುತ್ತಿದ್ದವರಿಗೆ ಬಿಎಂಟಿಸಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಪಾದಾಚಾರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ರಿಂಗ್ ರಸ್ತೆಯ ಲಗ್ಗೆರೆ ಬಳಿಯ ಕೆಂಪೇಗೌಡ ಆರ್ಚ್ ಬಳಿ ಘಟನೆ ನಡೆದಿದ್ದು, ಮೃತರಲ್ಲಿ ಓರ್ವನನ್ನು ಸುರೇಶ್ ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ರಾಜಾಜಿನಗರ ಸಂಚಾರ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಬಿಎಂಟಿಸಿ ಬಸ್ ಚಾಲಕನನ್ನು ರಾಜಾಜಿನಗರ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಎಸಿಪಿ ಪೃಥ್ವಿ ಹಾಗೂ ಡಿಸಿಪಿ ಸಚಿನ್ ಘೋರ್ಪಡೆ ಭೇಟಿ ನೀಡಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ : ಕಿಲ್ಲರ್ ಕೆಎಸ್ಸಾರ್ಟಿಸಿ : ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವು
KSRTC ಬಸ್ ಟೈಯರ್ ಸ್ಫೋಟ, ಇಬ್ಬರಿಗೆ ಗಾಯ
KSRTC ಬಸ್ ಟೈಯರ್ ಸ್ಫೋಟಗೊಂಡು ಇಬ್ಬರು ವ್ಯಕ್ತಿಗಳು ಗಂಭೀರ ಗಾಯಗೊಂಡಿರೋ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ವ್ಯಾಪ್ತಿಯ ಶಿವಪುರ ಗ್ರಾಮದ ಬಳಿ ನಡೆದಿದೆ.KSRTC ಬಸ್ ತಾವರೆಕೆರೆಯಿಂದ ಇಪ್ಪಾಡಿ ಮಾರ್ಗವಾಗಿ ಕುಣಿಗಲ್ಗೆ ತೆರಳುತ್ತಿತ್ತು. ಟೈಯರ್ ಸ್ಫೋಟಗೊಂಡು ಶಿವಪುರ ಗ್ರಾಮದ ಬಳಿ ಅವಘಡ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ಬಸ್ನ ಒಳಗಡೆ ಹಿಂಬದಿ ಚಕ್ರದ ಮೆಲ್ಬಾಗದ ಸೀಟ್ ನಲ್ಲಿ ಕುಳಿತಿದ್ದ ಇಬ್ಬರು ವ್ಯಕ್ತಿಗಳಿಗೆ ಕಾಲು ಮುರಿದಿದೆ. ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಾಯಳುಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.