ರಾಮನಗರ : ‘ನನಗೆ ರಾಜಕಾರಣ ಬೇಕೋ, ಬೇಡ್ವೋ ಅನ್ನಿಸಿಬಿಟ್ಟಿದೆ‘ ಎಂದು ಹೇಳಿಕೆ ನೀಡಿದ್ದ ಸಂಸದ ಡಿ.ಕೆ ಸುರೇಶ್ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಂದು ಬಿಡಿ.. ಹಾಲಿ ಸಂಸದರ ಕಥೆಯೇ ಕೇಳಿ. ಭ್ರಷ್ಟಾಚಾರದ ಮಧ್ಯೆ ಚುನಾವಣೆ ಬೇಡ ಅಂತಿದ್ದಾರೆ. ಅಂತವರೇ ಚುನಾವಣೆ ಬೇಡ ಅಂತ ಹೇಳ್ತಿರುವಾಗ ನಮ್ದೆಲ್ಲ ಯಾವ ಲೆಕ್ಕ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ರಾಜಕಾರಣದಲ್ಲಿ ಊಹಾಪೋಹ ಮಾಮೂಲಿ. ಇದೆಲ್ಲಾ ಗಾಳಿ ಸುದ್ದಿ. ಆ ರೀತಿಯ ಯಾವುದೇ ಚರ್ಚೆ ಆಗುತ್ತಿಲ್ಲ. ಈ ವಿಚಾರವನ್ನ ನನ್ನ ಮುಂದೆ ಯಾರೂ ಪ್ರಸ್ತಾಪ ಮಾಡಿಲ್ಲ. ಲೋಕಸಭಾ ಚುನಾವಣೆ ಬಗ್ಗೆ ನಾನು ಜಿಲ್ಲಾವಾರು ಸಭೆ ಮಾಡಿದ್ದೇನೆ. ಗೆದ್ದವರು, ಸೋತವರ ಜೊತೆ ಮಾತನಾಡಿದ್ದೇನೆ. ಯಾವ ರೀತಿ ಚುನಾವಣೆ ಎದುರಿಸಬೇಕು ಎಂಬುದರ ಕುರಿತು ರೂಪುರೇಷೆ ಸಿದ್ಧ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನನಗೆ ರಾಜಕಾರಣ ಬೇಕೋ, ಬೇಡ್ವೋ ಅನ್ನಿಸಿಬಿಟ್ಟಿದೆ : ಡಿ.ಕೆ ಸುರೇಶ್
ನನಗೆ ಚುನಾವಣೆ ಎದುರಿಸುವ ಆಸಕ್ತಿ ಇರಲಿಲ್ಲ
ರಾಷ್ಟ್ರ ರಾಜಕಾರಣದ ಬಗ್ಗೆ ಕುಮಾರಸ್ವಾಮಿ ಅವರಿಗೆ ಒಲವು ಇದ್ಯಾ? ಎಂಬ ಸುದ್ದಿಗಾರರ ಪ್ರಶ್ನೆಗೆ, ನನಗೆ ರಾಜಕಾರಣದ ಮೇಲೆ ಒಲವಿಲ್ಲ. ಕಳೆದ ಬಾರಿಯೂ ನನಗೆ ಚುನಾವಣೆ ಎದುರಿಸುವ ಆಸಕ್ತಿ ಇರಲಿಲ್ಲ. ಆದ್ರೆ, ಕಾರ್ಯಕರ್ತರ ಒತ್ತಾಸೆಯಿಂದ ರಾಜಕಾರಣದಲ್ಲಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಬಾಡಿಗೆದಾರರಿಗೆ ಅಗ್ರಿಮೆಂಟ್ ಕೊಡ್ತಿಲ್ಲ!
ಕಾಂಗ್ರೆಸ್ ಶಕ್ತಿ ಯೋಜನೆಗೆ ಚಾಲನೆ ವಿಚಾರ ಕುರಿತು ಮಾತನಾಡಿರುವ ಅವರು, ಸರ್ಕಾರದ ಐದು ಗ್ಯಾರಂಟಿ ಯೋಜನೆ ಬಗ್ಗೆ ಚರ್ಚೆ ಮಾಡಲು ಇನ್ನೂ ಸಮಯ ಇದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಅಂತಿದ್ದಾರೆ. ಆದರೆ, ಫಲಾನುಭವಿಗಳಿಗೆ ಹೇಗೆ ತಲುಪಿಸುತ್ತಾರೆ ಅನ್ನೋದು ಮುಖ್ಯ. ಈಗಾಗಲೇ ಬಾಡಿಗೆದಾರರಿಗೆ ಉಚಿತ ವಿದ್ಯುತ್ ಇಲ್ಲ ಅಂತಿದ್ರು. ಆಮೇಲೆ ಕೊಡ್ತೀವಿ ಅಂದ್ರು. ಈಗ ಮಾಲೀಕರು ಬಾಡಿಗೆದಾರರಿಗೆ ಅಗ್ರಿಮೆಂಟ್ ಕೊಡ್ತಿಲ್ಲ. ನಾನಾ ಸಮಸ್ಯೆಗಳು ಉದ್ಭವ ಆಗ್ತಿವೆ. ಘೋಷಣೆ ಮಾಡ್ದಾಗ ನನಗೂ ಫ್ರೀ, ನಿನಗೂ ಫ್ರೀ ಅಂದ್ರಿ. ಈಗ ಅದನ್ನ ಯಾವ ರೀತಿ ನಿಭಾಯಿಸ್ತಾರೆ ನೋಡಬೇಕು ಎಂದು ಹೇಳಿದ್ದಾರೆ.