ಬೆಂಗಳೂರು : ಹೆಣ್ಣು ಕುಟುಂಬದ ಕಣ್ಣು. ವಂದಿತಾ ಶರ್ಮಾ ನಮ್ಮ ಸರ್ಕಾರದ ಕಣ್ಣು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ವಿಧಾನಸೌಧ ಮುಂಭಾಗ ಹಮ್ಮಿಕೊಂಡಿದ್ದ ಶಕ್ತಿ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮಗೆ ದೊಡ್ಡ ಶಕ್ತಿ ಕೊಟ್ಟ ನಿಮ್ಮೆಲ್ಲರಿಗೂ ನಮಸ್ಕಾರ. ಜನರ ಆಶೀರ್ವಾದದಿಂದ ನಮಗೆ ಅಧಿಕಾರ ಸಿಕ್ಕಿದೆ. ಜನರ ನಂಬಿಕೆಯನ್ನ ಹುಸಿಗೊಳಿಸಲ್ಲ ಎಂದು ತಿಳಿಸಿದರು.
ನಾವು ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರಿಗೆ 5 ಉಚಿತ ಗ್ಯಾರಂಟಿಗಳ ಭರವಸೆ ನೀಡಿದ್ದೆವು. ಇಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದೆ. ನಮ್ಮ ರಾಜ್ಯ ದಿವಾಳಿ ಆಗುತ್ತೆ ಅಂತಾ ಬಿಜೆಪಿಯವರು ಹೇಳುತ್ತಿದ್ದಾರೆ. ಟೀಕೆಗಳು ಸತ್ತು ಹೋಗುತ್ತವೆ. ಕೆಲಸಗಳು ಮಾತ್ರ ಉಳಿಯುತ್ತದೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಟೀಕೆಗಳ ಸುರಿಮಳೆ ಸುರಿಸುತ್ತಿದ್ದಾರೆ. ವಿಪಕ್ಷಗಳಿಗೆ ಉತ್ತರ ನೀಡುವ ಸಾಮರ್ಥ್ಯ ನಮ್ಮ ಬಳಿ ಇಲ್ಲ ಎಂದು ತಿರುಗೇಟು ನೀಡಿದರು.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಇಂದಿನಿಂದ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣವಿರುತ್ತದೆ. ಉಚಿತ ಪ್ರಯಾಣಕ್ಕೆ ಬಿಪಿಎಲ್, ಎಪಿಎಲ್ ಎಂಬ ನಿಯಮವಿಲ್ಲ. ಯಾವುದಾದರೂ ಐಡಿ ತೋರಿಸಿದರೆ ಪ್ರಯಾಣ ಮಾಡಬಹುದು ಎಂದು ಹೇಳಿದರು.
ಸ್ಮಾರ್ಟ್ ಕಾರ್ಡ್ ಮಾಡಿಸಲು ಯಾರೂ ದುಡ್ಡು ಕೊಡಬೇಕಿಲ್ಲ. ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಲು 3 ತಿಂಗಳ ಕಾಲಾವಕಾಶವಿದೆ. ಮಧ್ಯಾಹ್ನ ೧ ಗಂಟೆ ಮೇಲೆ ಉಚಿತ ಪ್ರಯಾಣ ಮಾಡಲು ಅವಕಾಶವಿದೆ. ಶೇ.90 ಕ್ಕಿಂತ ಹೆಚ್ಚು ಬಸ್ಗಳಲ್ಲಿ ರಾಜ್ಯದ ಯಾವುದೇ ಮೂಲೆಗೆ ಮಹಿಳೆಯರು ಹೋಗಬಹುದು ಎಂದು ತಿಳಿಸಿದರು.