ಬೆಂಗಳೂರು : ಶಕ್ತಿ ಯೋಜನೆಗೆ ಚಾಲನೆ ನೀಡಿ ಭಾಷಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮ್ಯ ಮೈಕ್ ವಿಚಾರವಾಗಿ ಕಾಮಿಡಿ ಮಾಡಿ, ನಗೆ ಚಟಾಕಿ ಹಾರಿಸಿದರು.
ಸಿದ್ದರಾಮಯ್ಯ ಅವರು ಭಾಷಣ ಮಾಡುವಾಗ ಸಾಮಾನ್ಯವಾಗಿ ವೇದಿಕೆ ಮೇಲೆ ಕುಳಿತಿರುವ ನಾಯಕರತ್ತ ಆಗೊಮ್ಮೆ, ಈಗೊಮ್ಮೆ ನೋಡುತ್ತಾರೆ. ಅತ್ತ, ಇತ್ತ ತಿರುಗಿ ಭಾಷಣ ಮಾಡುವುದು ಅವರ ಶೈಲಿ. ಇಂದು ಸಹ ಅದೇ ಆಗಿದ್ದು.
ಭಾಷಣ ಮಾಡುವಾಗ ಅವರ ಧ್ವನಿ ಒಮ್ಮೆ ಜೋರಾಗಿ ಕೇಳುತ್ತಿತ್ತು. ಮತ್ತೊಮ್ಮೆ ಧ್ವನಿ ಕೇಳಿಸುತ್ತಲೇ ಇರಲಿಲ್ಲ. ಆಗ ಸಿದ್ದರಾಮಯ್ಯ ಅವರು, ಮೈಕ್ ಸರಿ ಇದೆ ಅಲ್ವಾ? ಯಾಕೆ ಧ್ವನಿ ಸರಿಯಾಗಿ ಕೇಳ್ತಾ ಇಲ್ಲ? ಅಂತಾ ಕೇಳಿದರು. ಬಳಿಕ, ಓ.. ನಾನು ಅತ್ತ, ಇತ್ತ ತಿರುಗಿದಾಗ ಸೌಂಡ್ ಕೇಳುವುದಿಲ್ಲ ಅಲ್ವೇ? ಎಂದು ನಗೆ ಚಟಾಕಿ ಹಾರಿಸಿದರು. ಆಗ ಕಾರ್ಯಕ್ರಮ ಆಯೋಜಕರೊಬ್ಬರು ಸಿದ್ದರಾಮಯ್ಯ ಕೈಗೆ ಮತ್ತೊಂದು ಮೈಕ್ ಕೊಟ್ಟರು.
ಪಂಚಿಂಗ್ ಭಾಷಣಕ್ಕೆ ಹೆಸರುವಾಸಿ
ಸಿದ್ದರಾಮಯ್ಯ ಅವರ ಭಾಷಣ ಅಂದ್ರೆ ಅಲ್ಲಿ ಶಿಳ್ಳೆ, ಚಪ್ಪಾಳೆ, ಕೇಕೆ ಇದ್ದೇ ಇರುತ್ತದೆ. ಎದುರಾಳಿಗಳ ವಿರುದ್ಧ ನಿರರ್ಗಳವಾಗಿ ಪಂಚಿಂಗ್ ಭಾಷಣ ಮಾಡುತ್ತಾರೆ. ವಿರೋಧ ಪಕ್ಷದಲ್ಲಿದ್ದಾಗಲಂತೂ ಸಿದ್ದರಾಮಯ್ಯನವರ ಭಾಷಣದ ಅಬ್ಬರ ತುಸು ಹೆಚ್ಚೇ ಇರುತ್ತದೆ. ಹೀಗಾಗಿಯೇ, ಹೌದು ಹುಲಿಯಾ ಎಂಬ ಡೈಲಾಗ್ ಭಾರೀ ಸದ್ದು ಕೂಡ ಮಾಡಿತ್ತು.
ಅವ್ರು ಎಡಬಿಡಂಗಿಗಳು ಎಂದ ಸಿಎಂ
ಇಂದು ಭಾಷಣ ಮಾಡುವಾಗ ವಿರೋಧ ಪಕ್ಷಗಳ ವಿರುದ್ಧ ತಮ್ಮದೇ ಶೈಲಿಯಲ್ಲಿ ವಾಗ್ದಾಳಿ ನಡೆಸಿದರು. ಉಚಿತ ಗ್ಯಾರಂಟಿ ಬಗ್ಗೆ ಅವಹೇಳನ ಮಾಡಿದ ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಎಡಬಿಡಂಗಿಗಳು ಎಂದು ಮೂದಲಿಸಿದರು. ಕೆಲಸ ಇಲ್ಲದವರು ಗೇಲಿ ಮಾಡ್ತಾರೆ. ಯಾರು ಗೇಲಿ ಮಾಡ್ತಾರೋ ಅವ್ರು ಅಲ್ಲೇ ಇರ್ತಾರೆ. ತೆಲೆಕೆಡಿಸಿಕೊಳ್ಬೇಡಿ, ಸೊಪ್ಪು ಹಾಕ್ಬೇಡಿ ಅಂತಾ ಜನರಿಗೆ ಕರೆ ನೀಡಿದರು. ಈ ವೇಳೆ ಮಾಧ್ಯಮಗಳಿಗೂ ಸಿದ್ದರಾಮಯ್ಯ ಟಾಂಗ್ ಕೊಟ್ಟರು.