ಬೆಂಗಳೂರು : ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕುಮಾರಸ್ವಾಮಿ ಬಹಳ ಜವಾಬ್ದಾರಿಯುತ ನಾಯಕರು. ಮೊದಲು ಲೋಕಾಯುಕ್ತಾಗೆ ಹೋಗಿ ದೂರು ನೀಡಲಿ ಎಂದು ಹೇಳಿದ್ದಾರೆ.
ನುಡಿದಂತೆ ನಡೆಯುವುದೇ ಕಾಂಗ್ರೆಸ್ನ ಶಕ್ತಿ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಟೀಕೆ ಮಾಡುತ್ತಿದ್ದಾರೆ. ವಿರೋಧ ಪಕ್ಷದವರು ಟೀಕೆ ಮಾಡಲಿ, ಟೀಕೆ ಬೇಗ ಸಾಯುತ್ತದೆ. ಕೆಲಸಗಳು ಉಳಿಯುತ್ತವೆ. ಟೀಕೆ ಎಲ್ಲರೂ ಮಾಡಲಿ, ನಮ್ಮನ್ನು ತಿದ್ದಲಿ. ಟೀಕೆ ಮಾಡುವವರಿಗೆ ಬೇಡ ಎನ್ನಲ್ಲ. ಕಪ್ಪು ಹಣ ತಂದು ನಮ್ಮ ಖಾತೆಗೆ ಹಾಕಲಿಲ್ಲ. ನಿಮ್ಮ ಖಾತೆಗೆ ಹಾಕಲಿಲ್ಲ ಎಂದು ಛೇಡಿಸಿದ್ದಾರೆ.
ಇದನ್ನೂ ಓದಿ : ಝೀರೋ ಟ್ರಾಫಿಕ್ ಮಾಡಿದಕ್ಕೆ ಸಿದ್ದರಾಮಯ್ಯ ತರಾಟೆ
ಜನರನ್ನು ಸಂತೋಷಪಡಿಸುವುದೇ ನಿಜವಾದ ಈಶ್ವರನ ಪೂಜೆ. ನಾನು ಆ ಈಶ್ವರನ ಪೂಜೆ ಮಾಡಿಕೊಂಡು ಬಂದಿದ್ದೇನೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಧ್ಯಪ್ರದೇಶದ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದೇನೆ. ನಾಡಿನ ಒಳಿತಿಗಾಗಿ ಪಾರ್ಥನೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ಶಕ್ತಿ ಯೋಜನೆ ಚಾಲನೆ ಕ್ಷಣಗಣನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಆಗಮಿಸಿದ್ದು, ಶಕ್ತಿ ಯೋಜನೆಗೆ ಚಾಲನೆಗೆ ಕ್ಷಣಗಣನೆ ಶುರುವಾಗಿದೆ. ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಂಧನ ಸಚಿವ ಕೆ.ಜೆ.ಜಾರ್ಜ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕಂದಾಯ ಸಚಿವ ಕೃಷ್ಣಭೈರೇಗೌಡ, ಶಾಸಕ ರಿಜ್ವಾನ್ ಅರ್ಷದ್ ಮತ್ತಿತರ ಜನಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದಾರೆ.