ಬೆಂಗಳೂರು : ಉಚಿತ ಬಸ್ ಪ್ರಯಾಣಕ್ಕೆ ಯಾಕೆ ಕಂಡಿಷನ್ ಗಳನ್ನ ಹಾಕ್ತಿದ್ದಾರೆ ಎಂಬ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸುತ್ತಾರೆಯೇ? ಎಂದು ರಾಜ್ಯ ಬಿಜೆಪಿ ಕುಟುಕಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಜನರ ಇದೇ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಇದೀಗ ತಮ್ಮದೇ ಪಕ್ಷದ ಹಿರಿಯರಾದ ಶಾಮನೂರು ಶಿವಶಂಕರಪ್ಪನವರ ಪ್ರಶ್ನೆಗಾದರೂ ಸಿಎಂ ಸಿದ್ದರಾಮಯ್ಯ ಅವರು ಉತ್ತರಿಸುತ್ತಾರೆಯೇ? ಎಂದು ಛೇಡಿಸಿದೆ.
‘ನೋಡಿದ ತಕ್ಷಣ ಹೆಂಗಸರು ಯಾರು, ಗಂಡಸರು ಯಾರು ಅಂತ ಗೊತ್ತಾಗುತ್ತೆ. ಗುರುತಿನ ಚೀಟಿ ಇಟ್ಕೊಂಡು ಓಡಾಡಬೇಕು ಅಂತ ಕಂಡಿಷನ್ ಹಾಕಿದ್ದು ಸರಿಯಲ್ಲ’ ಎಂದು ಹಿರಿಯರಾದ ಶಾಮನೂರು ಶಿವಶಂಕರಪ್ಪನವರು ಸರಕಾರದ ಬಗ್ಗೆ ಕಿಡಿಕಾರಿದ್ದಾರೆ! ಎಂದು ಕಾಲೆಳೆದಿದೆ.
ಯಾಕೆ ಕಂಡಿಷನ್ ಹಾಕ್ತಿದ್ದಾರೋ?
ಶಕ್ತಿ ಯೋಜನೆ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭ ಆಗಿದೆ. ಆದ್ರೆ, ಯಾಕೆ ಕಂಡಿಷನ್ ಗಳನ್ನ ಹಾಕ್ತಿದ್ದಾರೋ ಗೊತ್ತಾಗಲಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ : ನನಗೆ ಹೆಣ್ಣುಮಕ್ಕಳು ಮೇಲೆ ಮಾತ್ರ ನಂಬಿಕೆ : ಡಿ.ಕೆ ಶಿವಕುಮಾರ್
ಆ ಚೀಟಿ, ಈ ಚೀಟಿ ತೋರಿಸಿ ಅಂತಾರೆ
ನೋಡಿದ ಕೂಡಲೇ ಮಹಿಳೆಯರು, ಪುರುಷರು ಅಂತಾ ಎಲ್ಲರಿಗೂ ಗೊತ್ತಾಗುತ್ತೆ. ಆ ಚೀಟಿ ತೋರಿಸಿ.. ಈ ಚೀಟಿ ತೋರಿಸಿ.. ಅಂತಾ ಕಂಡಿಷನ್ ಹಾಕಿದ್ದಾರೆ. ಬೇರೆಯದಕ್ಕೂ ಕಂಡಿಷನ್ ಹಾಕ್ತಾ ಇದ್ದಾರೆ. ಯಾಕೆ ಇಷ್ಟೊಂದು ಕಂಡಿಷನ್ ಹಾಕ್ತಾ ಇದ್ದಾರೆ ಗೊತ್ತಾಗುತ್ತಿಲ್ಲ. ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ (ಹಳ್ಳಿ ಗಾಡಿನಲ್ಲಿ) ಬಸ್ ಸೌಕರ್ಯ ಕಲ್ಪಿಸಬೇಕಿದೆ. ಮಹಿಳೆಯರಿಗೆ ಮೀಸಲಾತಿ ತಂದಿದ್ದು ನಾವು. ಹೆಚ್ಚು ಕಂಡಿಷನ್ ಗಳನ್ನ ಹಾಕೋದು ಸರಿಯಲ್ಲ ಎಂದು ತಮ್ಮದೇ ಸರ್ಕಾರದ ಷರತ್ತುಗಳಿಗೆ ಬೇಸರಿಸಿದ್ದಾರೆ.