ಮೈಸೂರು : ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣದ(ಆರ್ಥಿಕ) ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರದ ತಲೆನೋವು ನಿಮಗ್ಯಾಕೆ? ಎಂದು ಫುಲ್ ಗರಂ ಆಗಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾವು ಹೇಳಿದಂತೆ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ. ನಾನು ಏನ್ ಹೇಳಿದ್ದೇನೆ ಅದನ್ನೇ ಮಾಡುತ್ತೇನೆ. ಬಿಜೆಪಿಯವರಂತೆ ಸುಳ್ಳು ಹೇಳುವುದಿಲ್ಲ. ನಾನು ಅಧಿಕಾರ ಇರಲಿ, ಇಲ್ಲದಿರಲಿ ಒಂದೇ ರೀತಿ ಇರುತ್ತೇನೆ ಎಂದು ಹೇಳಿದ್ದಾರೆ.
ವಿದ್ಯುತ್ ದರ ಏರಿಕೆ ವಿಚಾರ ಕುರಿತು ಮಾತನಾಡಿ, ವಿದ್ಯುತ್ ದರವನ್ನು ಪ್ರತಿ ವರ್ಷ ರೆಗ್ಯುಲೇಟರಿ ಕಮಿಷನ್ ದರ ಪರಿಷ್ಕರಣೆ ಮಾಡುತ್ತೆ. ಜೂನ್ 1 ರಿಂದ ಜಾರಿ ಮಾಡುತ್ತಾರೆ. ನಾವು ಅಧಿಕಾರಕ್ಕೆ ಬರುವ ಮುಂಚಿತವಾಗಿ ವಿದ್ಯುತ್ ದರ ಪರಿಷ್ಕರಣೆ ಆಗಿದೆ. ಚುನಾವಣೆ ನೀತಿ ಸಂಹಿತೆಯಿಂದ ತಡೆ ಆಗಿತ್ತು. ಜೂನ್ ತಿಂಗಳಿಂದ ಅದು ಜಾರಿ ಆಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನೂ ಓದಿ : ನಾನು ರಾಜ್ಯದ ಉದ್ದಗಲಕ್ಕೂ ಸಂಚಾರ ಮಾಡುತ್ತೇನೆ : ಹೆಚ್.ಡಿ ಕುಮಾರಸ್ವಾಮಿ
ಟಿವಿಗಳಲ್ಲಿ ದಿನವಿಡೀ ಗ್ಯಾರಂಟಿಯದ್ದೇ ಚರ್ಚೆ
ವಿರೋಧ ಪಕ್ಷಗಳ ಜೊತೆಗೆ ಮಾಧ್ಯಮಗಳೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಉಚಿತ ವಿದ್ಯುತ್ ಬೇಡ ಅಂದವರಿಗೆ ನಾವು ಬಲವಂತ ಮಾಡುತ್ತಿಲ್ಲ. ಸರಾಸರಿ ಬಳಕೆ ಆಧಾರದಲ್ಲಿ ಶೇಕಡ 10ರಷ್ಟು ವಿದ್ಯುತ್ ನೀಡುತ್ತೇವೆ. ಸುಮ್ಮನೆ ದುಂದು ವೆಚ್ಚ ಮಾಡಲು ಪೂರ್ತಿ 200 ಯುನಿಟ್ ಕರೆಂಟ್ ಕೊಡೋಕೆ ಆಗುತ್ತಾ? ಟಿವಿಗಳಲ್ಲಿ ದಿನವಿಡೀ 200 ಯುನಿಟ್ ಬಗ್ಗೆ ಇದೇ ಚರ್ಚೆ ಎಂದು ಸಿದ್ದರಾಮಯ್ಯ ಕೆರಳಿದ್ದಾರೆ.
ರಾಜ್ಯಕ್ಕೆ ಹೋಗುವವರು ಟಿಕೆಟ್ ತಗೋಬೇಕು
ನಾಳೆಯಿಂದ ಮಹಿಳೆಯರ ಉಚಿತ ಸಾರಿಗೆ ಪ್ರಯಾಣ ಯೋಜನೆ ಜಾರಿ ಆಗುತ್ತೆ. ರಾಜ್ಯದ ಎಲ್ಲ ಮಹಿಳೆಯರಿಗೆ ವೋಲ್ವೋ, ಎಸಿ ಬಸ್ ಬಿಟ್ಟು ಎಲ್ಲಾ ಬಸ್‌ಗಳಲ್ಲಿ ಉಚಿತ ಪ್ರಯಾಣ ಇರಲಿದೆ. ರಾಜ್ಯದ ಒಳಗೆ ಮಾತ್ರ, ಬೇರೆ ರಾಜ್ಯಗಳಿಗೆ ಹೋದ್ರೆ ಇಲ್ಲ. ಹೊರ ರಾಜ್ಯಕ್ಕೆ ಹೋಗುವವರು ರಾಜ್ಯದ ಗಡಿ ವರೆಗೆ ಹೋಗಿ ನಂತರ ಟಿಕೆಟ್ ತಗೋಬೇಕು. ನಾಳೆ ಮಧ್ಯಾಹ್ನ 1 ಗಂಟೆಯಿಂದ ಯೋಜನೆ ಚಾಲು ಆಗುತ್ತೆ. ವಿಧಾನಸೌದದ ಬಳಿ ನಾನು, ಡಿಸಿಎಂ ಹಾಗೂ ಸಾರಿಗೆ ಮಂತ್ರಿ ಜಾರಿ ಮಾಡುತ್ತೇವೆ. ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಏಕಕಲಾದಲ್ಲಿ ಜಾರಿಯಾಗಲಿದೆ ಎಂದು ಹೇಳಿದ್ದಾರೆ.