ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್ ಕಮಾಲ್ ಮಾಡಿದ್ದಾರೆ.
ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಆಸರೆಯಾದ ರಹಾನೆ, ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಟಾಸ್ ಸೋತು ಬ್ಯಾಟ್ ಮಾಡಿದ ಆಸಿಸ್ 469 ರನ್ ಗೆ ಆಲೌಟ್ ಆಯಿತು. ಬಳಿಕ ಬ್ಯಾಟ್ ಮಾಡಿದ ಭಾರತಕ್ಕೆ ಆಘಾತದ ಮೇಲೆ ಆಘಾತ. ಆರಂಭಿಕರಾದ ರೋಹಿತ್ ಶರ್ಮಾ, ಯಂಗ್ ಗನ್ ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
ಆಸಿಸ್ ಬೌಲರ್ ಗಳ ದಾಳಿಗೆ ಈ ಅನುಭವಿ ಬ್ಯಾಟರ್ ಗಳು ಮಕಾಡೆ ಮಲಗಿದರು. ಕೇವಲ 71 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ, ಓವಲ್ ಕ್ರೀಡಾಂಗಣದಲ್ಲಿ ಗಟ್ಟಿಯಾಗಿ ಬೇರೂರಿದ ಅಜಿಂಕ್ಯ ರಹಾನೆ ಬೊಂಬಾಟ್ ಪ್ರದರ್ಶನ ನೀಡಿದರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೂರನೇ ದಿನ ಅರ್ಧಶತಕ ಪೂರೈಸಿದರು.
50 ಸಿಡಿಸಿದ ಮೊದಲ ಭಾರತೀಯ
ಒಂದೂವರೆ ವರ್ಷದ ಬಳಿಕ ಟೆಸ್ಟ್ ಪಂದ್ಯ ಆಡುತ್ತಿರುವ ಅಜಿಂಕ್ಯ ರಹಾನೆ ಆಸೀಸ್ ಬೌಲರ್ ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ಮಿಂಚಿದರು. ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ 50 ರನ್ ಪೂರೈಸಿದರು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಅರ್ಧಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾದರು.
ಜಡೇಜಾ, ರಹಾನೆ ಉತ್ತಮ ಜೊತೆಯಾಟ
ಆಲ್ ರೌಂಡರ್ ರವೀಂದ್ರ ಜಡೇಜಾ ಹಾಗೂ ಅಜಿಂಕ್ಯ ರಹಾನೆ 71 ರನ್ ಜೊತೆಯಾಟ ಟೀಂ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡಿತು. 51 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನೊಂದಿಗೆ ಜಡೇಜಾ 48 ರನ್ ಗಳಿಸಿ ಕೇವಲ 2 ರನ್ ಗಳಿಂದ ಅರ್ಧಶತಕ ವಂಚಿತರಾದರು. ಜಡ್ಡು ಬಳಿಕ ಕ್ರೀಸ್ ಗೆ ಬಂದ ಶಾರ್ದೂಲ್ ಠಾಕೂರ್ ಜೊತೆಯೂ ರಹಾನೆ ಉತ್ತಮ ಜೊತೆಯಾಟವಾಡಿದರು.
ಅರ್ಧಶತಕ ಸಿಡಿಸಿದ ಶಾರ್ದೂಲ್
129 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನೊಂದಿಗೆ 89 ರನ್ ಗಳಿಸಿದ ರಹಾನೆ, ಪ್ಯಾಟ್ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು. 108 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ ಶಾರ್ದೂಲ್ ಠಾಕೂರ್ ಅರ್ಧಶತಕ ಪೂರೈಸಿದರು. ಸದ್ಯ 8 ವಿಕೆಟ್ ಕಳೆದುಕೊಂಡಿರುವ ಭಾರತ 292 ರನ್ ಗಳಿಸಿದೆ. ಶಾರ್ದೂಲ್ ಹಾಗೂ ಮೊಹಮದ್ ಶಮಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.