Friday, March 29, 2024

ಪ್ರೀತಿ-ನಂಬಿಕೆಯ ‘ಮೆಲೋಡಿ ಡ್ರಾಮಾ’ ರಿವ್ಯೂ : ಕೊಡೋ ಕಾಸಿಗೆ ಮೋಸವಂತೂ ಆಗಲ್ಲ

ಬೆಂಗಳೂರು : ಸ್ಯಾಂಪಲ್ಸ್​ನಿಂದ ಭರವಸೆ ಮೂಡಿಸಿದ್ದ ಮೆಲೋಡಿ ಡ್ರಾಮಾ, ರಿಲೀಸ್ ಬಳಿಕವೂ ಅದೇ ಜೋಶ್​ನ ಉಳಿಸಿಕೊಂಡಿದೆ. ಹೊಸ ಪ್ರತಿಭೆಗಳ ಹೊಸ ಪ್ರಯೋಗಕ್ಕೆ ಪ್ರೇಕ್ಷಕಪ್ರಭು ಜೈ ಅಂದಿದ್ದಾನೆ. ಅನು ಪ್ರಭಾಕರ್, ರಂಗಾಯಣ ರಘು ಕೂಡ ಟೀಂಗೆ ಸಾಥ್ ನೀಡಿದ್ದು, ಪ್ರೀಮಿಯರ್​​ನಲ್ಲೇ ಶಹಬ್ಬಾಸ್ ಅನಿಸಿಕೊಂಡಿದೆ.

ಮದುವೆ ಮನೆಯಿಂದ ಓಡಿ ಬಂದು, ಮಡಿಕೇರಿಗೆ ಹೊರಟು ನಿಂತ ನಟಿಗೆ ಲಿಫ್ಟ್ ಕೊಡುವ ನಟ. ಆಕೆ ಓಡಿ ಬಂದಿರೋದು ಯಾರಿಗಾಗಿ, ಏತಕ್ಕಾಗಿ? ಮೊದಲೇ ಮದುವೆ ಆಗಿದ್ರೂ ಸಹ ಗಂಡನನ್ನು ಬಿಟ್ಟು ಮರು ಮದುವೆಗೆ ಯಾಕೆ ಮುಂದಾಗ್ತಾಳೆ? ಹಾಗಾದ್ರೆ, ಮದುವೆ ಅನ್ನೋ ಸಂಬಂಧಕ್ಕೆ ಬೆಲೆ ಇಲ್ಲವಾ? ಪ್ರೀತಿಗಿಂತ ತ್ಯಾಗ ದೊಡ್ಡದಾ? ಪ್ರೀತಿ, ಪ್ರೇಮದಲ್ಲಿ ನಂಬಿಕೆಯ ಪಾತ್ರ ಎಂಥದ್ದು? ಹೀಗೆ ಎಲ್ಲದಕ್ಕೂ ತೆರೆ ಮೇಲೆ ಉತ್ತರ ಕೊಡುತ್ತೆ ಈ ಮೆಲೋಡಿ ಡ್ರಾಮಾ.

ನಾಯಕನಟನಾಗಿ ಸತ್ಯ ಬಣ್ಣ ಹಚ್ಚಿದ್ದು, ನಟಿ ಸುಪ್ರಿತಾ ಸತ್ಯನಾರಾಯಣ್ ಕಿರುತೆರೆ ಲೋಕದಿಂದ ಬೆಳ್ಳಿತೆರೆಗೆ ನಾಯಕನಟಿಯಾಗಿ ಬಡ್ತಿ ಪಡೆದಿದ್ದಾರೆ. ಇವರಿಬ್ಬರ ಲವ್ ಸ್ಟೋರಿ ಹಾಗೂ ಬ್ರೇಕಪ್ ಸ್ಟೋರಿಗೆ ಬೂಸ್ಟರ್ ಡೋಸ್ ಅಂದ್ರೆ ರಂಗಾಯಣ ರಘು ಹಾಗೂ ಕಾಪು ಸೀನ್​​ನಲ್ಲಿ ಬರೋ ಒಂದು ಮಾದರಿ ಸತಿ-ಪತಿ ಜೋಡಿ. ಅಲ್ಲದೆ, ರಾಜೇಶ್ ನಟರಂಗ ದೇಶ ಕಾಯೋ ಸೈನಿಕನಾಗಿ, ನೆಗೆಟಿವ್ ಶೇಡ್​​ನಲ್ಲಿ ಬರೋ ವಿನೋದ್ ಪ್ರಭಾಕರ್ ಚಿತ್ರದ ಹೈಲೈಟ್ಸ್.

ಮಂಜು ಕಾರ್ತಿಕ್​ ಚೊಚ್ಚಲ ನಿರ್ದೇಶನ

ಒಂದೂವರೆ ದಶಕದ ಕಾಲ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಮಂಜು ಕಾರ್ತಿಕ್​ಗೆ ಇದು ಚೊಚ್ಚಲ ನಿರ್ದೇಶನ. ತಮ್ಮ ಇಡೀ ಅನುಭವವನ್ನ ಈ ಚಿತ್ರದ ಮೇಲೆ ಪ್ರಯೋಗ ಮಾಡಿದ್ದಾರೆ. ಇನ್ನು ನ್ಯಾಷನಲ್ ಅಥ್ಲೀಟ್ ನಂಜುಂಡ ರೆಡ್ಡಿ ಈ ಚಿತ್ರದಿಂದ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಅವರ ಸಿನಿಮಾ ಪ್ಯಾಷನ್ ಚಿತ್ರದ ಮೇಕಿಂಗ್ ಕ್ವಾಲಿಟಿಯಿಂದ ಎದ್ದು ಕಾಣ್ತಿದೆ.

ಯೂತ್ಸ್​ಗೆ ಬೇಗ ಕನೆಕ್ಟ್ ಆಗೋ ಕಥೆ

ಬೈಕ್ ಜರ್ನಿಯಲ್ಲೇ ಬಹುತೇಕ ಚಿತ್ರ ಸಾಗಲಿದ್ದು, ಬೆಂಗಳೂರು, ಮೈಸೂರು, ಮಡಿಕೇರಿ, ಕಾಪು, ಹುಬ್ಬಳ್ಳಿ, ಬಿಜಾಪುರದ ತನಕ ಪಾತ್ರಗಳ ಜೊತೆ ಕಥೆ ಟ್ರಾವೆಲ್ ಆಗಲಿದೆ. ಇಲ್ಲಿ ಹದಿ ಹರೆಯದ ಮನಸ್ಸುಗಳು ತೆಗೆದುಕೊಳ್ಳೋ ಆತುರದ ನಿರ್ಧಾರದಿಂದ ಏನೆಲ್ಲಾ ಅನಾಹುತ ಸಂಭವಿಸಲಿದೆ ಅನ್ನೋದನ್ನ ಬಹಳ ಅಚ್ಚುಕಟ್ಟಾಗಿ ಹೇಳಲಾಗಿದೆ. ಬಹುಶಃ ಇದು ಯೂತ್ಸ್​ಗೆ ಬೇಗ ಕನೆಕ್ಟ್ ಆಗಲಿದ್ದು, ಕ್ಲೈಮ್ಯಾಕ್ಸ್​​ನಲ್ಲಿ ಸಿಕ್ಸ್​ಪ್ಯಾಕ್ ಹೀರೋ ಚೇತನ್ ಚಂದ್ರ ನೀಡುವ ಸಂದೇಶ ಇಂಪ್ರೆಸ್ಸೀವ್ ಆಗಿದೆ.

ಕಿರಣ್ ರಾಗ ಸಂಯೋಜನೆ ಚಿತ್ರದ ಜೀವಾಳ

ಚಿತ್ರದ ಟೈಟಲ್​ಗೆ ತಕ್ಕನಾಗಿ ಕಿರಣ್ ರವೀಂದ್ರನಾಥ್ ರಾಗ ಸಂಯೋಜನೆ ಚಿತ್ರದ ಜೀವಾಳ ಅನಿಸಲಿದೆ. ಅದಕ್ಕೆ ಪೂರಕವಾದ ಸಾಹಿತ್ಯ, ಸಂಭಾಷಣೆ ಇದ್ದು, ಯೂತ್ಸ್ ಜೊತೆ ಪೋಷಕರಿಗೂ ಸಿನಿಮಾ ಇಷ್ಟವಾಗಲಿದೆ. ಇಂದು ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಿದ್ದು, ಎಲ್ಲೆಡೆ ಬಿಗ್ ಓಪನಿಂಗ್ ಪಡೆದುಕೊಂಡಿದೆ.

ಒಟ್ಟಾರೆ, ಮನರಂಜನೆ ಜೊತೆ ಯೂತ್ಸ್​​ಗೆ ಮೆಸೇಜ್ ಕೊಡ್ತಿರೋ ಈ ಸಿನಿಮಾನ ಥಿಯೇಟರ್​ನಲ್ಲಿ ನೋಡಿದ್ರೆ ಕೊಡೋ ಕಾಸಿಗೆ ಮೋಸವಂತೂ ಆಗಲ್ಲ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES