ಬೆಂಗಳೂರು : ರಾಜ್ಯದಲ್ಲಿ ಮತ್ತೆ ಪಠ್ಯ ಪರಿಷ್ಕರಣೆ ದಂಗಲ್ ಶುರುವಾಗಿದೆ. ಆಡಳಿತರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಹೆಡ್ಗೇವಾರ್‌ರಂತ ಹೇಡಿಗಳನ್ನು ಪಠ್ಯದಲ್ಲಿರಲು ಬಿಡಲ್ಲ ಎಂದ ಬಿ.ಕೆ.ಹರಿಪ್ರಸಾದ್ ಅವರ ವಿರುದ್ಧ ರಾಜ್ಯ ಬಿಜೆಪಿ ಕೆಂಡಕಾರಿದೆ. ಬಿ.ಕೆ ಹರಿಪ್ರಸಾದ್ ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಛೇಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಇದುವರೆಗೂ ಮಾಡಿದ ಒಂದೇ ಒಂದು ಒಳ್ಳೆ ಕೆಲಸ ಅಂದರೆ, ಮಾನಸಿಕ ಅಸ್ವಸ್ಥರಾಗಿರುವ ಬಿ.ಕೆ ಹರಿಪ್ರಸಾದ್ ಅವರಂತವರನ್ನು ಸಚಿವ ಸಂಪುಟದಿಂದ ದೂರವಿಟ್ಟಿದ್ದು! ಎಂದು ಕುಟುಕಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅಲ್ಪಜ್ಞಾನಿಗಳು, ಮತಿಗೇಡಿಗಳು ಬಾಲ ಬಿಚ್ಚುತ್ತಿದ್ದಾರೆ. ಗೌರವಾನ್ವಿತ ಹೆಡ್ಗೇವಾರರಂತ ಅಪ್ರತಿಮ ದೇಶಭಕ್ತರ ಹೆಸರು ಹೇಳುವ ಯೋಗ್ಯತೆಯನ್ನು ಹರಿಪ್ರಸಾದರವರು ಮೊದಲು ಸಂಪಾದಿಸಲಿ, ಉಳಿದದ್ದೆಲ್ಲ ಮತ್ತೆ! ಎಂದು ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ : ಮಕ್ಕಳ ಹಿತದೃಷ್ಟಿಯಿಂದ ಪಠ್ಯ ಪರಿಷ್ಕರಣೆ ಮಾಡುತ್ತೇವೆ : ಸಚಿವ ಮಧು ಬಂಗಾರಪ್ಪ
ಹೆಡ್ಗೇವಾರ್ ಹೇಡಿ ಎಂದಿದ್ದ ಹರಿಪ್ರಸಾದ್
ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಮಾತನಾಡಿದ್ದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಹೆಡ್ಗೇವಾರ್‌ರಂತ ಹೇಡಿಗಳನ್ನು ಮಕ್ಕಳ ಪಠ್ಯದಲ್ಲಿರಲು ಬಿಡಲ್ಲ ಎಂದು ಖಡಕ್ ಹೇಳಿಕೆ ನೀಡಿದ್ದರು. ಆ ಮೂಲಕ ಹೆಡ್ಗೇವಾರ್ ರನ್ನ ಹೇಡಿ ಎಂದಿದ್ದರು.
ಸಂಘ ಪರಿವಾರದ ಸಿದ್ಧಾಂತಗಳು ಯಾವುದೇ ಇಲಾಖೆಯಲ್ಲಿ ತೂರಲು ಬಿಡುವುದಿಲ್ಲ. ಬಿಜೆಪಿ ಅಥವಾ ಸಂಘ ಪರಿವಾರದವರು ಅವರದ್ದೇ ಆದ ಗ್ರಂಥಗಳಲ್ಲಿ ಆರು ಬಾರಿ ಕ್ಷಮಾಪಣಾ ಪತ್ರ ಕೊಟ್ಟಿರೋದಾಗಿ ಉಲ್ಲೇಖಿಸಿದ್ದಾರೆ. ಬ್ರಿಟೀಷರಿಗೆ ಯಾಕೆ ಕ್ಷಮಾಪಣಾ ಪತ್ರ ನೀಡಿದರು ಎಂದು ಹೇಳಲಿ. ಇಂತಹ ರಣಹೇಡಿಗಳ ಬಗ್ಗೆ ಮಕ್ಕಳು ಓದುವ ಪಠ್ಯ ಪುಸ್ತಕದಲ್ಲಿ ಇಡಲು ಬಿಡೋದಿಲ್ಲ ಎಂದು ಗುಡುಗಿದ್ದರು.