ಬೆಂಗಳೂರು : ಔರಂಗಜೇಬ್ ಕುರಿತ ವಿವಾದಾತ್ಮಕ ವಾಟ್ಸಪ್ ಸ್ಟೇಟಸ್ ಹಾಕಿದ ಹಿನ್ನೆಲೆ ಕೊಲ್ಲಾಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಪೊಲೀಸರು 144 ಸೆಕ್ಷನ್ ಜಾರಿಗೊಳಿಸಿದ್ದಾರೆ.
ಮೊಘಲ್ ದೊರೆ ಔರಂಗಜೇಬ್ ಹೆಸರು ಉಲ್ಲೇಖಿಸಿ ಕೆಲ ಯುವಕರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಾಕಿದ್ದರು. ಹೀಗಾಗಿ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಿನ್ನೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಇಂದು ಕೆಲ ಹಿಂದೂಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು.
ಕೊಲ್ಲಾಪುರದಲ್ಲಿ ಮಟನ್ ಮಾರ್ಕೆಟ್ ಪ್ರದೇಶದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಇದಾದ ಬಳಿಕ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಅಲ್ಲದೆ, ಕೊಲ್ಹಾಪುರ ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಿದ್ದಾರೆ.
ಘಟನೆ ಹಿನ್ನೆಲೆ ಏನು?
ಔರಂಗಜೇಬ್ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಯುವಕರು ವಾಟ್ಸಪ್ ನಲ್ಲಿ ವಿವಾದಾತ್ಮಕ ಸ್ಟೇಟಸ್ ಹಾಕಿದ್ದರು. ಹೀಗಾಗಿ, ಹಿಂದೂಪರ ಸಂಘಟನೆಗಳು ಕೊಲ್ಹಾಪುರ ನಗರ ಬಂದ್ ಗೆ ಕರೆ ನೀಡಿದ್ದವು. ಬಂದ್ ವೇಳೆ ಕಿಡಿಗೇಡಿಗಳು ಸಂಘಟನೆಯ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಸಾರ್ವಜನಿಕ ಆಸ್ತಿಪಾಸ್ತಿ ನಾಶವಾಗಿದೆ. ಹಲವು ಆಟೋ ಹಾಗೂ ನಗರದಲ್ಲಿದ್ದ ಕಾರುಗಳು ಜಖಂ ಆಗಿವೆ. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರು.
ಅಶ್ರುವಾಯು ಪ್ರಯೋಗ
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ಧಾರೆ. ಗಲಾಟೆ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಅಶ್ರುವಾಯು ಹಾರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದ್ದಾರೆ. ಬಳಿಕ, ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಲು ಕೊಲ್ಹಾಪುರ ನಗರದಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಪ್ರಸ್ತುತ ಕೊಲ್ಹಾಪುರ ನಗರ ಬೂದಿ ಮುಚ್ಚಿದ ಕೆಂಡದಂತಾಗಿದೆ.