ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿನ ಇಷ್ಟು ದೊಡ್ಡ ಮಟ್ಟದ ಸೋಲು ನಮಗೆ ಹಿನ್ನಡೆ ತಂದಿದೆ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ನಿರೀಕ್ಷೆ ಮೀರಿ ಹಿನ್ನೆಡೆಯಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಹಲವು ದಿನದಿಂದ ಬೇರೆ ಬೇರೆ ರೀತಿಯ ಚರ್ಚೆ, ವಿಶ್ಲೇಷಣೆ ನಡೆದಿದೆ. ಇದು ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುವ ಸಂದರ್ಭ. ನಾವು ಮಾಡಿಕೊಳ್ಳಬೇಕಾದು ಆತ್ಮಾವಲೋಕನ ಅಲ್ಲ. ನಾವು ಸೋತ ಕಾರಣ ಹುಡುಕಿ ಮುಂದಿನ ದಿನ ಪಕ್ಷ ತೀರ್ಮಾನ ಮಾಡಲಿದೆ. ಚುನಾವಣೆ ಫಲಿತಾಂಶ ಬಳಿಕ ಕಾರ್ಯಕರ್ತರ ಮನೋಸ್ಥೈರ್ಯ ತುಂಬುವ ಕೆಲಸ ಆಗಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೆಳಗಾವಿಯಲ್ಲೂ ‘ಬಿಜೆಪಿ ಸೋಲಿಗೆ ನಾನೇ ಹೊಣೆ’ ಹೊರುತ್ತೇನೆ : ಬಸವರಾಜ ಬೊಮ್ಮಾಯಿ
ಬಿಎಸ್ ವೈರಿಂದ ಅಧಿಕಾರಕ್ಕೆ ಬಂದೆವು
ಸೋಲು ಎಲ್ಲವೂ ಮುಗಿಯಿತು ಅಂತ ಅಂದುಕೊಳ್ಳುವುದಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಂತಹ ನಾಯಕ ಉಳಿದ ಕಾರಣ ನಾವು ಅಧಿಕಾರಕ್ಕೆ ಬಂದೆವು. ಸೋಲು ತಾತ್ಕಾಲಿಕ ಹಿನ್ನೆಡೆ ಅಷ್ಟೇ. ಲೋಕಸಭಾ ಸದಸ್ಯನಾಗಿ, ಮಾಜಿ ಕೇಂದ್ರ ಸಚಿವ, ಮಾಜಿ ಸಿಎಂ ಆಗಿ ಹೇಳ್ತೀನಿ.. ಧೃತಿಗೆಡುವ ಅವಶ್ಯಕತೆ ಇಲ್ಲ. ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಕಟ್ಟಬೇಕಾದ ಅವಶ್ಯಕತೆ ಇದೆ ಎಂದಿದ್ದಾರೆ.
ಬೊಮ್ಮಾಯಿ ವಿಪಕ್ಷ ನಾಯಕರಾಗಲಿ
ವಿಪಕ್ಷ ನಾಯಕ ಆಯ್ಕೆಯಾಗದಿರೋ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಅವರು, ಶಾಡೋ ಸಿಎಂ ಆಗಿರೋ ಬಸವರಾಜ ಬೊಮ್ಮಾಯಿ ಅವರನ್ನು ವಿಪಕ್ಷ ನಾಯಕನನ್ನಾಗಿ ಕೂರಿಸಬೇಕು. ಆಡಳಿತ ಪಕ್ಷ ಮಾಡುವ ತಪ್ಪುಗಳನ್ನು ವಿರೋಧಿಸಬೇಕು. ಸದನದಲ್ಲಿ ಪ್ರಶ್ನೆ ಮಾಡಬೇಕು. ಮುಖ್ಯಮಂತ್ರಿ ಆಯ್ಕೆಯಾಗುವ ಮೂರ್ನಾಲ್ಕು ದಿನದಲ್ಲಿ ವಿಪಕ್ಷ ನಾಯಕನ ಆಯ್ಕೆ ಆಗಬೇಕು. ಬಿಜೆಪಿಯಲ್ಲಿ ಹಿಂದಿನಿಂದಲೂ ಈ ಸಂಸ್ಕೃತಿ ಬೆಳೆದು ಬಂದಿದೆ. ಆದರೆ, ಈ ಬಾರಿ ತಡ ಆಗಿದೆ ಎಂದು ಡಿ.ವಿ ಸದಾನಂದಗೌಡ ಹೇಳಿದ್ದಾರೆ.