Sunday, January 12, 2025

ಅಭಿ ಬಾಳಲ್ಲಿ ಅವಿವಾ ತಂಗಾಳಿ, ಮಗನ ಮದ್ವೆ ನೋಡಿ ಸುಮಲತಾ ಭಾವುಕ : ಹೇಗಿತ್ತು ಕಲ್ಯಾಣೋತ್ಸವ?

ಬೆಂಗಳೂರು : ಇಷ್ಟು ದಿನ ಬ್ಯಾಚಲರ್ ಆಗಿದ್ದ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್, ಇದೀಗ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಅವಿವಾ ಕೈ ಹಿಡಿಯೋ ಮೂಲಕ ಹೊಸ ಬಾಳ ಪಯಣದ ದೋಣಿ ಹತ್ತಿದ್ದಾರೆ.

ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆದ ಈ ಅದ್ಧೂರಿ ಕಲ್ಯಾಣೋತ್ಸವಕ್ಕೆ ಚಿತ್ರರಂಗದ ತಾರೆಯರು, ರಾಜಕಾರಣಿಗಳು ಸಾಕ್ಷಿ ಆಗಿ, ನೂತನ ದಂಪತಿಗೆ ಶುಭ ಕೋರಿದ್ದಾರೆ. ರಜನಿಕಾಂತ್, ಮೋಹನ್ ಬಾಬು, ಯಶ್ ಸೇರಿದಂತೆ ಯಾರೆಲ್ಲಾ ಬಂದಿದ್ರು ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ ನೋಡಿ.

ಅಮರ್ ಚಿತ್ರದ ಮೂಲಕ ನಾಯಕನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ನಟಿ ಕಮ್ ಸಂಸದೆ ಸುಮಲತಾ ಅಂಬರೀಶ್ರ ಪುತ್ರ ಅಭಿಷೇಕ್ ಅಂಬರೀಶ್, ಇದೀಗ ತಮ್ಮ ಜೀವನದಲ್ಲಿ ಮುಖ್ಯ ಘಟ್ಟವೊಂದಕ್ಕೆ ಕಾಲಿಸಿರಿದ್ದಾರೆ. ತಮ್ಮ ಬಹುಕಾಲದ ಗೆಳತಿ ಅವಿವಾ ಬಿದ್ದಪ್ಪರನ್ನ ವರಿಸೋ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಮಾಣಿಕ್ಯ ಚಾಮರ ವಜ್ರದಲ್ಲಿ ಮಾಂಗಲ್ಯ ಧಾರಣೆ

ಇಂದು ಬೆಳಗ್ಗೆ 9.30ರಿಂದ 10.30ರ ವರೆಗೆ ನಡೆದ ಶುಭ ಮುಹೂರ್ತದಲ್ಲಿ ಅರಮನೆ ಮೈದಾನದ ಮಾಣಿಕ್ಯ ಚಾಮರ ವಜ್ರದಲ್ಲಿ ಅವಿವಾಗೆ ಮಾಂಗಲ್ಯ ಧಾರಣೆ ಮಾಡಿದ್ರು ಅಭಿಷೇಕ್ ಅಂಬರೀಶ್. ಅಂಬಿ ನಿಧನದ ಬಳಿಕ ಸುಮಲತಾ ಅಂಬರೀಶ್ ಮನೆಯಲ್ಲಿ ನಡೆಯುತ್ತಿರೋ ಶುಭಕಾರ್ಯ ಇದಾಗಿದ್ದು, ರಾಕ್ಲೈನ್ ವೆಂಕಟೇಶ್ ಉಸ್ತುವಾರಿಯಲ್ಲಿ ಎಲ್ಲವೂ ಸುಸಜ್ಜಿತವಾಗಿ ನಡೆಯಿತು.

ರಜನಿ, ಉಪ್ಪಿ, ಯಶ್ ಹಾಗೂ ಸ್ಟಾರ್ ಗಳ ಸಮಾಗಮ

ಸೂಪರ್ ಸ್ಟಾರ್ ರಜನಿಕಾಂತ್, ತೆಲುಗು ನಟ ಮೋಹನ್ ಬಾಬು, ಮಂಚು ಮನೋಜ್, ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ, ಆರ್.ಅಶೋಕ್, ನಟ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ, ಅಶ್ವಿನಿ ಪುನೀತ್ ರಾಜ್ ಕುಮಾರ್, ಸುದೀಪ್, ಪ್ರಜ್ವಲ್ ದೇವರಾಜ್ ದಂಪತಿ, ಚಂದ್ರಶೇಖರ್ ಗುರೂಜಿ, ಸುಂದರ್ ರಾಜ್, ಮೇಘನಾ ರಾಜ್, ದೊಡ್ಡಣ್ಣ ಸೇರಿದಂತೆ ಸಾಕಷ್ಟು ಮಂದಿ ತಾರೆಯರು ಹಾಗೂ ರಾಜಕಾರಣಿಗಳು ನೂತನ ದಂಪತಿಗೆ ಶುಭ ಕೋರಿದರು.

ಮಗನ ಮದ್ವೆ ನೋಡಿ ಸುಮಲತಾ ಭಾವುಕ

ಅಂದಹಾಗೆ ಅವಿವಾ ಬಿದ್ದಪ್ಪ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ. ಆಕೆಯೂ ಸಹ ಫ್ಯಾಷನ್ ಡಿಸೈನಿಂಗ್ ಜೊತೆ ಮಾಡೆಲ್ ಹಾಗೂ ನಟಿಯಾಗಿ ಮಿಂಚಿದರು. ಐದಾರು ವರ್ಷಗಳಿಂದ ಸ್ನೇಹದಲ್ಲಿದ್ದ ಅಭಿಷೇಕ್-ಅವಿವಾ ಜೋಡಿ, ನಂತರ ಅವರ ಮಧ್ಯೆ ಪ್ರೇಮಾಂಕುರಿಸಿ, ಇದೀಗ ಹೊಸ ಬಾಳಿಗೆ ಹೆಜ್ಜೆ ಇಟ್ಟಿದ್ದಾರೆ. ಮಗನ ಮದ್ವೆ ನೋಡಿ ಸುಮಲತಾ ಭಾವುಕರಾದರು. ಹೊಸ ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ಮೂಲಕ ಅಂಬಿ ಮನೆಗೆ ಹೊಸ ಕಳೆ ಬಂದಿದೆ.

10 ಸಾವಿರ ಮಂದಿಗೆ ಮದುವೆ ಆಮಂತ್ರಣ

ಮುಹೂರ್ತ ಕಾರ್ಯಕ್ರಮ ಅಂಬರೀಶ್ ಕುಟುಂಬದ ಅತ್ಯಾಪ್ತರು ಹಾಗೂ ಬಂಧು ಬಳಗಕ್ಕಷ್ಟೇ ಸೀಮಿತ ಆಗಿತ್ತು. ಹಾಗಾಗಿ ಕೇವಲ ಒಂದು ಸಾವಿರ ಮಂದಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಇದೇ ಜೂನ್ 7ರ ಸಂಜೆ ಅರಮನೆ ಮೈದಾನದಲ್ಲಿ ಅಭಿ-ಅವಿವಾ ರಾಯಲ್ ರಿಸೆಪ್ಷನ್ ನಡೆಯಲಿದೆ. ಅದಕ್ಕೆ ಸುಮಾರು 10 ಸಾವಿರ ಮಂದಿಗೆ ಆಹ್ವಾನ ನೀಡಿದ್ದು, ವಿವಿಧ ಚಿತ್ರರಂಗದ ತಾರೆಯರು ಹಾಗೂ ಒಂದಷ್ಟು ನ್ಯಾಷನಲ್ ಲೀಡರ್ಸ್ ಈ ಆರತಕ್ಷತಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಜೂ.16ಕ್ಕೆ ಗೆಜ್ಜಲಗೆರೆಯಲ್ಲಿ ಬೀಗರ ಔತಣಕೂಟ

ಇನ್ನು ಜೂನ್ 16ಕ್ಕೆ ಮದ್ದೂರಿನ ಗೆಜ್ಜಲಗೆರೆ ಗ್ರಾಮದಲ್ಲಿ ಅಂಬರೀಶ್ ಆಶಯದಂತೆ ಒಂದು ಲಕ್ಷ ಮಂದಿಗೆ ಬೀಗರ ಔತಣಕೂಟ ಏರ್ಪಡಿಸಿದ್ದು, ಅಲ್ಲಿ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಜಮಾಯಿಸೋ ಸಾಧ್ಯತೆಯಿದೆ. ಅದೇನೇ ಇರಲಿ, ಕಳೆದ ಒಂದು ವಾರದಿಂದ ವಕ್ಕಲಿಗ ಸಂಪ್ರದಾಯದಂತೆ ಚಪ್ಪರ, ಅರಿಶಿಣ, ಬಳೆ, ಮೆಹಂದಿ ಶಾಸ್ತ್ರಗಳನ್ನ ಅರ್ಥಪೂರ್ಣ ಹಾಗೂ ಅವಿಸ್ಮರಣೀಯವಾಗಿ ನಡೆದವು. ಇದೀಗ ಮುಹೂರ್ತ ಮುಗಿಸಿರೋ ಕುಟುಂಬಸ್ಥರು, ರಾಯಲ್ ರಿಸೆಪಕ್ಷನ್ಗೆ ತಯಾರಿ ನಡೆಸುತ್ತಿವೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES