ಬೆಂಗಳೂರು : ಚಕ್ರವರ್ತಿ ಸೂಲಿಬೆಲೆ ಅವರನ್ನು ಜೈಲಿಗೆ ಹಾಕ್ತೇವೆ ಎಂದು ಹೇಳಿಕೆ ನೀಡಿದ್ದ ಸಚಿವ ಎಂ.ಬಿ ಪಾಟೀಲ್ ಗೆ ಸಂಸದ ತೇಜಸ್ವಿ ಸೂರ್ಯ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜೈಲಿಗೆ ಹಾಕುತ್ತೇವೆ ಎಂಬ ಅಹಂಕಾರದಿಂದ ಹೇಳಿದ್ರು. ಅವರ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
ಚಕ್ರವರ್ತಿ ಸೂಲಿಬೆಲಿಯವರು ಮೈಸೂರಿನಲ್ಲಿ ಸಾರ್ವಕರ್ ಕುರಿತು ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಅದಕ್ಕೆ ಅನುಮತಿ ಕೊಡಬಾರದು, ಸಮಸ್ಯೆ ಮಾಡಬೇಕು ಎಂದು ಕಾಂಗ್ರೆಸ್ ಸಚಿವರು ಪ್ರಯತ್ನ ಮಾಡಿದ್ರು. ಅದಕ್ಕೆ ಚಕ್ರವರ್ತಿ ಅವರು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುತ್ತಿದೆ ಇದು ಹಿಟ್ಲರ್ ಸರ್ಕಾರ ಅಂತಾ ಹೇಳಿದ್ರು ಎಂದಿದ್ದಾರೆ.
ಸದನದ ಹೊರಗೂ, ಒಳಗೂ ಹೋರಾಟ
ಜೈಲಿಗೆ ಹಾಕುತ್ತೇವೆ ಎನ್ನುವ ಮೂಲಕ ಸಚಿವ ಎಂ.ಬಿ ಪಾಟೀಲ್ ಅವರು, ಚಕ್ರವರ್ತಿ ಸೂಲಿಬೆಲೆ ಅವರು ಹೇಳಿದಂತೆ ಹಿಟ್ಲರ್ ಸರ್ಕಾರ ಎಂಬುವುದಕ್ಕೆ ಮತ್ತಷ್ಟು ಶಕ್ತಿ ತುಂಬಿದ್ದಾರೆ. ಕಾರ್ಯಕ್ರಮಗಳನ್ನು ಹತ್ತಿಕ್ಕುವ ಕೆಲಸ ನಡೆದರೆ ಸದನದ ಹೊರಗೂ ಒಳಗೂ ಹೋರಾಟ ಮಾಡುತ್ತೇವೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಹಿಟ್ಲರ್ ಸರ್ಕಾರ ಜಾರಿಗೆ ಬಂದಿದೆ : ಚಕ್ರವರ್ತಿ ಸೂಲಿಬೆಲೆ
ಸರ್ಕಾರ ಬಂದು 20 ದಿನ ಆಗಿಲ್ಲ..!
ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್ ಸರ್ಕಾರ ಬಂದು 15ರಿಂದ 20 ದಿನ ಆಗಿಲ್ಲ. ಆಗಲೇ ಕೆಲ ಸಚಿವರುಗಳು ಒಂದಷ್ಟು ಹೇಳಿಕೆ ಕೊಡ್ತಾ ಇದ್ದಾರೆ. ರೈತರ ದೃಷ್ಟಿಯಿಂದ ತಂದಿದ್ದ ಕಾಯ್ದೆ ಅದು. ವಾಪಸ್ ಪಡೆಯುತ್ತೇವೆ ಎಂದರೆ ಸದನದ ಒಳಗೆ ಹೊರಗೆ ಏನು ಮಾಡಬೇಕು ಎಂದು ಪಕ್ಷದಿಂದ ತೀರ್ಮಾನ ಪ್ರಕಟಿಸುತ್ತೇವೆ ಎಂದು ತಿಳಿಸಿದ್ದಾರೆ.
ಸಭೆ ಕರೆದಿದ್ದನ್ನು ಸ್ವಾಗತ ಮಾಡ್ತೇವೆ
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ಸಭೆ ಕರೆದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸಹಭಾಗಿತ್ವದಲ್ಲಿ ನಡೆಸಬೇಕಿದೆ. ಸಬ್ ಅರ್ಬನ್ ರೈಲು ಯೋಜನೆ, ಔಟರ್ ರಿಂಗ್ ರೋಡ್ ಯೋಜನೆ ಆಗಬೇಕಿದೆ. ಈ ಎಲ್ಲಾ ವಿಚಾರಗಳು ಚರ್ಚೆ ಮಾಡ್ತೇವೆ. ಪಾರ್ಟಿ ಯಾವುದೇ ಇರಲಿ, ಅಭಿವೃದ್ಧಿ ವಿಚಾರದಲ್ಲಿ ಸಭೆ ಕರೆದಿದ್ದನ್ನು ಸ್ವಾಗತ ಮಾಡ್ತೇವೆ. ಕೇಂದ್ರ ಸರ್ಕಾರದ ಸಹಕಾರ ತರುವ ಕೆಲಸ ನಾವು ಮಾಡ್ತೇವೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.