Sunday, December 22, 2024

ಕಿಲ್ಲರ್ ಕೆಎಸ್ಸಾರ್ಟಿಸಿ : ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವು

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಕೆಎಸ್ಸಾರ್ಟಿಸಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಬಳಿ ಈ ಘಟನೆ ನಡೆದಿದೆ. ಸ್ಕೂಟರ್ ಗೆ ಬಸ್ ಡಿಕ್ಕಿ ಹೊಡೆದಿದೆ. ಲತಾ ಮೃತ ಮಹಿಳೆ ಎಂದು ತಿಳಿದುಬಂದಿದೆ.

ಅಪಘಾತ ಬಳಿಕ ಫ್ರೀಡಂ ಪಾರ್ಕ್ ರಸ್ತೆಯಲ್ಲಿ ಕಿಲೋಮೀಟರ್‌ ನಷ್ಟು ಟ್ರಾಫಿಕ್ ಜ್ಯಾಂ ಉಂಟಾಗಿದೆ. ಅಪಘಾತವಾಗಿ ಅರ್ಧ ಗಂಟೆ ಕಳೆದರೂ ಆಂಬುಲೆನ್ಸ್ ಬಂದಿಲ್ಲ. ಹೀಗಾಗಿ, ಮಹಿಳೆಯ ಮೃತದೇಹವನ್ನು ಆಟೋದಲ್ಲೇ ರವಾನಿಸಲಾಗಿದೆ. ಮೃತ ಮಹಿಳೆಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ನಡೆದಿದ್ದು ಹೇಗೆ?

ಶೇಷಾದ್ರಿ ರಸ್ತೆಯಲ್ಲಿ ಅನಂತರಾಮಕೃಷ್ಣ ತಮ್ಮ ಸ್ಕೂಟರ್ ನಲ್ಲಿ ಪತ್ನಿ ಲತಾ (55) ಅವರ ಜೊತೆಗೆ ಹೆಬ್ಬಾಳ ಕೆಂಪಾಪುರದಿಂದ ಗಾಂಧಿನಗರದ ಪೋಥೀಸ್ ಶೋರೂಂಗೆ ಹೋಗುತ್ತಿದ್ದರು. ಮಧ್ಯಾಹ್ನ 3.05 ಸುಮಾರಿನಲ್ಲಿ ಆನಂದ್ ರಾವ್ ಫ್ಲೈ ಓವರ್ ಡೌನ್ ರಾಂಪ್ ಹತ್ತಿರ ವೇಗವಾಗಿ ಬಂದ ಕೆಎಸ್ಸಾರ್ಟಿಸಿ ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಬೈಕ್ ನಲ್ಲಿದ್ದ ಅನಂತರಾಮಕೃಷ್ಣ ಹಾಗೂ ಹಿಂದೆ ಕುಳಿತಿದ್ದ ಲತಾ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಲತಾ ಅವರ ತಲೆ ಮೇಲೆ ಬಸ್ಸಿನ ಚಕ್ರ ಹರಿದು ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.

ಒದ್ದಾಡುತ್ತಿದ್ದರೂ ಬಾರದ ಆ್ಯಂಬುಲೆನ್ಸ್

ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಕೂಗಳತೆ ದೂರದಲ್ಲೇ ಅಪಘಾತ ಸಂಭವಿಸಿದೆ. ಮಹಿಳೆ ಪ್ರಾಣ ಹೋಗುತ್ತಿದ್ದರೂ ಆ್ಯಂಬುಲೆನ್ಸ್ ಬಂದಿಲ್ಲ. ಕಿಲ್ಲರ್ ಬಸ್ ಹಾಗೂ ಆ್ಯಂಬುಲೆನ್ಸ್‌ ಅವಾಂತರಕ್ಕೆ ಅಮಾಯಕ ಜೀವ ಬಲಿಯಾಗಿದೆ. ಉಪ್ಪಾರ ಪೇಟೆ ಪೊಲೀಸರು ಬಸ್ ಚಾಲಕ ಹಾಗೂ ನಿರ್ವಾಹಕನನ್ನು ಬಂಧಿಸಿದ್ದಾರೆ.

ಶಾಪಿಂಗ್ ಗೆ ಹೋಗುತ್ತಿದ್ದ ಮಹಿಳೆ

ಬಸ್ ಗುದ್ದಿದ ರಭಸಕ್ಕೆ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಪ್ರಾಣ ಪಕ್ಷಿ ಹಾರಿ ಹೋಗಿದೆ. ಮಹಿಳೆ ಸ್ಕೂಟರ್ ನಲ್ಲಿ ಶಾಪಿಂಗ್‌ ಹೋಗುತ್ತಿದ್ದರು. ಈ ವೇಳೆ ಕೆಎಸ್ಸಾರ್ಟಿಸಿ ಬಸ್ ಮಹಿಲೆಯ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಮಹಿಳೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಆ್ಯಂಬುಲೆನ್ಸ್‌ ಬಾರದಿರುವುದಕ್ಕೆ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES