ಬೆಂಗಳೂರು : ಗೋವುಗಳನ್ನು ಏಕೆ ಕಡಿಯಬಾರದು? ಎಂದಿರುವ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಹೇಳಿಕೆಗೆ ಮಾಜಿ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಯಾರ ಹೊಟ್ಟೆ ತುಂಬಿಸಲು ಗೋವುಗಳನ್ನು ಕಡಿಯಲು ಪ್ರೇರಣೆ ನೀಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ತನ್ನ ನಿಜ ಬಣ್ಣವನ್ನು ತೋರಿಸಲು ಪ್ರಾರಂಭಿಸಿದೆ. ಗೋವುಗಳನ್ನು ಏಕೆ ಕಡಿಯಬಾರದು ಎನ್ನುವ ನಿಮ್ಮ ಮನಸ್ಥಿತಿಯೇ ನನಗೆ ವಿಚಿತ್ರವಾಗಿ ಕಾಣಿಸುತ್ತಿದೆ. ಒಂದಿಷ್ಟು ಕಸಾಯಿ ಕಾಖಾನೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ, ಗೋವುಗಳ ದಾರುಣ ಅಂತ್ಯ ಎಲ್ಲವನ್ನು ನೋಡಿದ ನಂತರ ಮತ್ತೊಮ್ಮೆ ಆಲೋಚನೆ ಮಾಡಿ ಹೇಳಿಕೆ ನೀಡಿ ಎಂದು ಛೇಡಿಸಿದ್ದಾರೆ.
ಗೋ ತಳಿಗಳ ಅಭಿವೃದ್ಧಿ ಮಾಡಿ
ಮನೆಯಲ್ಲಿ ಗೋವು ಸಾಕುವುದಿಲ್ಲವೆಂದ ಮಾತ್ರಕ್ಕೆ ಅದರ ಬಗ್ಗೆ ಭಾವನಾತ್ಮಕ ಸಂಬಂಧ ಇರಬಾರದು ಎಂದೇನಿಲ್ಲ. ಅದು ತಾಯಿಯಂತೆ ನಿತ್ಯ ಪೂಜೆಗೊಳಗಾಗುವ ದೈವ. ಅದರ ಸಂರಕ್ಷಣೆ, ಪೋಷಣೆ ಮತ್ತು ಗೋ ತಳಿಗಳ ಅಭಿವೃದ್ಧಿ ಸರ್ಕಾರದ ಮೂಲ ಕರ್ತವ್ಯವಾಗಿರಬೇಕೇ ಹೊರತು ಗೋವುಗಳನ್ನು ಕಡಿಯುವುದಕ್ಕೆ ಪ್ರೇರೇಪಿಸುವುದಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಹಿಟ್ಲರ್ ಸರ್ಕಾರ ಜಾರಿಗೆ ಬಂದಿದೆ : ಚಕ್ರವರ್ತಿ ಸೂಲಿಬೆಲೆ
ಸ್ವಲ್ಪ ತಿಳಿದುಕೊಂಡು ಮಾತನಾಡಿ
ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕೇವಲ ರಾಜಕೀಯ ಲಾಭ ನಷ್ಟದ ದೃಷ್ಟಿಯಿಂದ ನೋಡಬೇಡಿ. ಅದರ ಬದಲು ಜನಸಾಮಾನ್ಯನ, ರೈತನ ಜೀವನದಲ್ಲಿ ಇರುವ ಅದರ ಭಾವನಾತ್ಮಕ ಸಂಬಂಧದ ಬಗ್ಗೆ ತಿಳಿದುಕೊಂಡು ಮಾತನಾಡುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.
ಗೋ ಹತ್ಯೆ ನಿಷೇಧ ಕಾಯ್ದೆ ಕಾಂಗ್ರೆಸ್ ಅವಧಿಯಲ್ಲಿ 1964ರಿಂದಲೂ ಅಸ್ತಿತ್ವದಲ್ಲಿತ್ತು. ಆಗಲೂ ಸಹ ಗೋವುಗಳನ್ನು ಕಡಿಯಬಾರದು ಎಂದುಬು ಕಾನೂನಾಗಿತ್ತು. ಆದರೆ, ಆ ಕಾನೂನಿನಲ್ಲಿದ್ದ ಕೆಲ ದುರ್ಬಲವಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಗೋಹತ್ಯೆ ನಿಷೇಧ ಕಾಯ್ದೆಯನ್ನು ಬಿಜೆಪಿ ಸರ್ಕಾರದಲ್ಲಿ ಬಲಪಡಿಸಿದ್ದೇವೆ ಎಂದು ಹೇಳಿದ್ದಾರೆ.