Wednesday, January 22, 2025

ನನ್ನ ಹೆಂಡತಿಗೂ ಬಸ್ ಪ್ರಯಾಣ ಉಚಿತ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕೆಲಸ ಮಾಡುವವರಿಗೆ, ಕೆಲಸ ಮಾಡದವರಿಗೆ ಎಲ್ಲರಿಗೂ ಬಸ್ ಪ್ರಯಾಣ ಉಚಿತ. ನನ್ನ ಹೆಂಡತಿಗೂ ಸೇರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್‌ 11 ರಿಂದ ಎಸಿ ಬಸ್‌ಗಳು ಮತ್ತು ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಪ್ರಯಾಣ ಮಾಡಬಹುದು ಎಂದು ಘೋಷಿಸಿದರು.

ಗ್ಯಾರಂಟಿ ನಂ.1 : ಗೃಹಜ್ಯೋತಿ ಯೋಜನೆ

ಜುಲೈ 1ರಿಂದ ಆಗಸ್ಟ್ 31ರವರೆಗೆ ಬಳಸಲಾಗುವ ವಿದ್ಯುತ್ ಬಿಲ್ ಉಚಿತ. ಈವರೆಗೆ ಉಳಿಸಿಕೊಂಡಿರುವ ಎಲ್ಲ ಬಿಲ್ ಅನ್ನು ಜನರೇ ಕಟ್ಟಬೇಕು. 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಕೊಡುತ್ತೇವೆ. ಎಲ್ಲರಿಗೂ ಉಚಿತವಾಗಿ ಕೊಡುತ್ತೇವೆ ಎಂದು ವಾಗ್ದಾನ ಕೊಟ್ಟಿದ್ದೇವೆ. ಈ ಗ್ಯಾರಂಟಿ ಜಾರಿಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಸಿದ್ದರಾಮಯ್ಯ ಘೋಷಿಸಿದರು.

ಗ್ಯಾರಂಟಿ ನಂ. 2 : ಗೃಹಲಕ್ಷ್ಮಿ ಯೋಜನೆ

ಜುಲೈ15ರಿಂದ ಪರಿಶೀಲಿಸಿ, ಆಗಸ್ಟ್ 15ರಿಂದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ. ಜಮಾ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಮನೆಯ ಯಜಮಾನಿ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಅಪ್ಲಿಕೇಶನ್ ದಾಖಲೆ ಒದಗಿಸಬೇಕಾಗುತ್ತದೆ. ಜೂನ್ 15ರಿಂದ ಜು.15ರವರೆಗೆ ಆನ್ ಲೈನ್ ನಲ್ಲಿ ಅಥವಾ ಆಫ್ ಲೈನ್ ನಲ್ಲಿ ಅಪ್ಲಿಕೇಶನ್ ಕೊಡಬೇಕು. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಇರುವ, 18 ವರ್ಷ ಮೀರಿದ ಮನೆಯ ಯಜಮಾನಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ. ಯಾರು ಯಜಮಾನಿ ಅನ್ನುವುದನ್ನು ಅವರೇ ತೀರ್ಮಾನಿಸಬೇಕಾಗುತ್ತದೆ. ಸೋಷಿಯಲ್ ಸೆಕ್ಯೂರಿಟಿ ಪೆನ್ಶನ್ ತೆಗೆದುಕೊಳ್ಳುವವರಿಗೆ ಕೂಡ 2,000 ರೂ. ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.

ಗ್ಯಾರಂಟಿ ನಂ.3 : ಅನ್ನಭಾಗ್ಯ ಯೋಜನೆ

ಜುಲೈ 1ರಿಂದ ಎಲ್ಲ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಇರುವವರಿಗೆ ತಲಾ 10 ಕಿಲೋ ಆಹಾರ ಧಾನ್ಯ (ಅಕ್ಕಿ) ನೀಡಲಾಗುವುದು. ಈಗಾಗಲೇ ಆಹಾರ ಧಾನ್ಯ ರವಾನಿಸಿರುವುದರಿಂದ ಮತ್ತು ಸಂಗ್ರಹ ಇಲ್ಲದಿರುವುದರಿಂದ  ಜುಲೈ 1ರಿಂದ ಯೊಜನೆ ಜಾರಿಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.

ಗ್ಯಾರಂಟಿ ನಂ.4 : ಶಕ್ತಿ ಯೋಜನೆ

ಎಲ್ಲ ಮಹಿಳೆಯರಿಗೆ ವಿದ್ಯಾರ್ಥಿನಿಯರು ಸೇರಿದಂತೆ ಜೂನ್ 11ರಿಂದ ಉಚಿತ ಬಸ್ ಸೇವೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಇದು ಕರ್ನಾಟಕದ ಒಳಗೆ ಹಾಗೂ ಕರ್ನಾಟಕದವರಿಗೆ ಮಾತ್ರ ಅನ್ವಯವಾಗಲಿದೆ. ಎಸಿ ಬಸ್, ನಾನ್-ಎಸಿ ಬಸ್, ರಾಜಹಂಸ ಬಸ್ ಹೊರತುಪಡಿಸಿ ಎಲ್ಲ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು. ಜೂನ್ 11ರಂದು ಈ ಯೋಜನೆ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಆಸನ (ಸೀಟ್) ಮೀಸಲು ಇರಿಸಲಾಗುವುದು. ಬಿಎಂಟಿಸಿಯಲ್ಲಿ ಮೀಸಲು ಇಲ್ಲ ಎಂದು ಮಾಹಿತಿ ನೀಡಿದರು.

ಗ್ಯಾರಂಟಿ ನಂ.5 : ಯುವ ನಿಧಿ ಯೋಜನೆ

2022-23ರಲ್ಲಿ ವ್ಯಾಸಂಗ ಮಾಡಿದ, ನಿರುದ್ಯೋಗಿ ಎಂದು ಘೋಷಿಸಿಕೊಂಡ ಎಲ್ಲ ಜಾತಿಯ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ಹಾಗೂ ಡಿಪ್ಲೊಮಾ ಮಾಡಿದವರಿಗೆ 1,500 ರೂ. ನೀಡಲಾಗುವುದು. ರಿಜಿಸ್ಟರ್ ಮಾಡಿಕೊಂಡು 24 ತಿಂಗಳವರೆಗೆ ಇದು ಅನ್ವಯ. ಒಂದು ವೇಳೆ ಸರ್ಕಾರಿ ಕೆಲಸ ಪಡೆದುಕೊಂಡರೆ ಈ ಯೋಜನೆ ನೀಡಲಾಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

RELATED ARTICLES

Related Articles

TRENDING ARTICLES