ಬೆಂಗಳೂರು : ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು, ಜನರನ್ನು ಭಿಕ್ಷಾಟನೆ ಕೂಪಕ್ಕೆ ತಳ್ಳುವ ವ್ಯವಸ್ಥೆ ನಡೆದಿದೆ ಎಂದು ಆರೋಪ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜನರನ್ನು ಭಿಕ್ಷಾಟನೆ ಸರದಿಗೆ ನಿಲ್ಲಿಸಿ ಕಾಂಗ್ರೆಸ್ ಅಧಿಕಾರ ಪಡೆಯುವ ಷಡ್ಯಂತ್ರ ಎಂದು ಛೇಡಿಸಿದ್ದಾರೆ.
ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರ ಕನಸು ನುಚ್ಚುನೂರು ಮಾಡುವ ಕೆಲಸ. ಕಾಂಗ್ರೆಸ್ ಸಿದ್ಧಾಂತ ಗಾಳಿಗೆ ತೂರಿ ಮತದಾರರಿಗೆ ಆಮಿಷ ಒಡ್ಡಿದೆ. ಕಾಂಗ್ರೆಸ್ ನಿಂದ ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುವ ಕೆಲಸ ನಡೆದಿದೆ. ಸಿದ್ಧಾಂತದಿಂದ ಗೆದ್ದಿದ್ದೀವಿ ಎಂದು ಹೇಳುವ ಎದೆಗಾರಿಕೆ ಕಾಂಗ್ರೆಸ್ ನಾಯಕರಿಗಿಲ್ಲ ಎಂದು ಕುಟುಕಿದ್ದಾರೆ.
ಇದನ್ನೂ ಓದಿ : ಫ್ರೀ.. ಫ್ರೀ.. ಫ್ರೀ.. ನನ್ನ ಹೆಂಡತಿಗೂ ಬಸ್ ಪ್ರಯಾಣ ಉಚಿತ : ಸಿಎಂ ಸಿದ್ದರಾಮಯ್ಯ
ಗ್ಯಾರಂಟಿ ಕಾರ್ಡ್ ಗಾಗಿ 5 ವರ್ಷದ ಸರ್ಕಾರ
ಉಚಿತ ಗ್ಯಾರಂಟಿ ಕಾರ್ಡ್ ಮೂಲಕ ಕಾಂಗ್ರೆಸ್ ಗೆಲುವು ಸಾಧಿಸಿದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಕಳೆದ 15 ದಿನಗಳಿಂದ ಗ್ಯಾರಂಟಿ ಕಾರ್ಡ್ ಗಳ ಬಗ್ಗೆ ಚರ್ಚೆ ನಡೆದಿತ್ತು. ಗ್ಯಾರಂಟಿ ಕಾರ್ಡ್ ಗಾಗಿ ಐದು ವರ್ಷದ ಸರ್ಕಾರ ಎಂಬ ಚಿಂತನೆ. ರಾಜ್ಯದ ಸಚಿವರಿಗೆ ಪ್ರಕೃತಿ ವಿಕೋಪ ಬಗ್ಗೆ ಗಮನಹರಿಸಲು ಸಮಯವಿಲ್ಲ ಎಂದು ಎ.ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ.
ಬಿಜೆಪಿಯಿಂದ ಪ್ರತಿ ವ್ಯಕ್ತಿಯ ಅಕೌಂಟಿಗೆ 15 ಲಕ್ಷ ರೂಪಾಯಿ ನೀಡುವ ಭರವಸೆ ವಿಚಾರ ಮಾತನಾಡಿರುವ ಅವರು, ಸಿದ್ಧರಾಮಯ್ಯ, ಡಿಕೆಶಿ ‘ಗ್ಯಾರಂಟಿ’ ಹೇಳಿಕೆಗಳು ಎಲ್ಲರ ಬಳಿ ಇವೆ.15 ಲಕ್ಷ ಅಕೌಂಟ್ ಗೆ ಹಾಕುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರೆ ಕೊಡಿ, ಕ್ಷಮೆ ಕೇಳುತ್ತೇನೆ. ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಎ.ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ.