Friday, November 22, 2024

ಕೆಲಸ ಮಾಡುವವರಷ್ಟೇ ಬೇಕು, ಯಾರನ್ನೂ ಮೆಚ್ಚಿಸುವ ಅಗತ್ಯವಿಲ್ಲ : ಕುಮಾರಸ್ವಾಮಿ

ಬೆಂಗಳೂರು : ಯಾರನ್ನೂ ಮೆಚ್ಚಿಸುವ ಅಗತ್ಯವಿಲ್ಲ, ನಿಷ್ಠೆಯಿಂದ ಪಕ್ಷದ ಕೆಲಸ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪಕ್ಷದ ಮುಖಂಡರಿಗೆ ತಾಕೀತು ಮಾಡಿದ್ದಾರೆ.

ಬಿಬಿಎಂಪಿ ಚುನಾವಣೆ ಸಮೀಪದಲ್ಲಿರುವ ಹಿನ್ನೆಲೆಯಲ್ಲಿ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಬಿಬಿಎಂಪಿ ವ್ಯಾಪ್ತಿಯ 28 ಕ್ಷೇತ್ರಗಳ ಮುಖಂಡರ ಜೊತೆ ಬಿಡದಿಯ ತೋಟದಲ್ಲಿ ಸಭೆ ನಡೆಸಿ ಚರ್ಚೆ ನಡೆಸಿ, ಪಕ್ಷ ಸಂಘಟನೆ ಹಾಗೂ ಪಾಲಿಕೆ ಚುನಾವಣೆಯ ಕೆಲವು ಸೂಚನೆಗಳನ್ನು ನೀಡಿದ್ದಾರೆ.

ಯಾವುದೇ ಕ್ಷಣದಲ್ಲಿ ಬಿಬಿಎಂಪಿ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಚುನಾವಣೆ ಯಾವಾಗ ಬೇಕಾದರೂ ಬರಲಿ. ನಮ್ಮ ಸಿದ್ಧತೆಗಳನ್ನು ನಾವು ಮಾಡಿಕೊಳ್ಳೋಣ. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇವೆ ಎನ್ನುವ ಅಧೈರ್ಯ ಬೇಡ. ಅನೇಕ ಸೋಲುಗಳನ್ನು ದಾಟಿಕೊಂಡು ಜೆಡಿಎಸ್ ಪಕ್ಷ ಫೀನಿಕ್ಸ್ ಪಕ್ಷಿಯಂತೆ ಮೇಲೆದ್ದು ಬಂದಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಗುಂಪುಗಾರಿಕೆ ಸಹಿಸುವ ಪ್ರಶ್ನೆ ಇಲ್ಲ

ಗುಂಪುಗಾರಿಕೆ ಬೇಡ, ಕೆಲಸ ಮಾಡುವವರಷ್ಟೇ ಬೇಕು. ಯಾವುದೇ ಕಾರಣಕ್ಕೂ ಗುಂಪುಗಾರಿಕೆ ಸಹಿಸುವ ಪ್ರಶ್ನೆ ಇಲ್ಲ. ಯಾರು ಯಾರನ್ನೂ ಮೆಚ್ಚಿಸುವ ರೀತಿಯಲ್ಲಿ ಕೆಲಸ ಮಾಡುವ ಅಗತ್ಯವಿಲ್ಲ. ಪಕ್ಷವನ್ನು ಇನ್ನೂ ಅಧೋಗತಿಗೆ ತಳ್ಳುವುದು ಬೇಡ. ಪಕ್ಷದ ನೆಲೆ ಇರುವ ವಾರ್ಡ್​ಗಳಲ್ಲಿ ಉತ್ತಮವಾಗಿ ಕೆಲಸ ಮಾಡಿ. ಜನರ ಸಂಪರ್ಕದಲ್ಲಿರಿ ಹಾಗೂ ಅವರಲ್ಲಿ ವಿಶ್ವಾಸ ಮೂಡಿಸಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ಸಂಸ್ಕಾರಹೀನರಿಗೆ ಹೇಳುವುದು ಇಷ್ಟೇ, ನನ್ನ ಪಕ್ಷವನ್ನು ವಿಸರ್ಜನೆ ಮಾಡಲ್ಲ : ಹೆಚ್.ಡಿ ಕುಮಾರಸ್ವಾಮಿ 

ಪಕ್ಷದ ಕಾರ್ಯಕರ್ತರನ್ನು ಬೆಳೆಸಿ 

ಪ್ರತಿ ವಾರ್ಡಿನ, ಪ್ರತಿ ಮತಗಟ್ಟೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಬೆಳೆಸಿ, ಜನರು ಹೆಚ್ಚೆಚ್ಚು ಪಕ್ಷಕ್ಕೆ ಸೇರಿಸಿಕೊಳ್ಳುವ ವಾತಾವರಣವನ್ನು ಸೃಷ್ಟಿ ಮಾಡಿ. ಜನರಲ್ಲಿ ಪಕ್ಷದ ಪರ ಒಲವು ವ್ಯಕ್ತವಾಗುವ ರೀತಿಯಲ್ಲಿ ಕೆಲಸ ಮಾಡಿ ಎಂದು ಕುಮಾರಸ್ವಾಮಿ ಮುಖಂಡರಿಗೆ ಕಿವಿಮಾತು ಹೇಳಿದ್ದಾರೆ.

ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಬೇಡಿ

ವಿಧಾನಸಭೆ ಚುನಾವಣೆ ವೈಫಲ್ಯಗಳಿಂದ ಪಾಠ ಕಲಿಯಬೇಕು. ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಬೇಡಿ ಎಂದರು. ಅಲ್ಲದೆ, ಪಕ್ಷ ಸಂಘಟನೆ ದೃಷ್ಟಿಯಿಂದ ಕುಮಾರಸ್ವಾಮಿ ಅವರು ಕಠಿಣ ಸೂಚನೆಗಳನ್ನು ಕೊಟ್ಟು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎನ್.ತಿಪ್ಪೇಸ್ವಾಮಿ, ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ 28 ವಿಧಾನಸಭೆ ಕ್ಷೇತ್ರಗಳ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES