ಕಾರವಾರ : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಜಾತಿ ಪ್ರೇಮ ನೋಡಿ ಈಡಿಗ ಸಮುದಾಯದ ಮುಖಂಡರು ಕಲಿಯಬೇಕು ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಮಾತನಾಡಿರುವ ಅವರು, ಸಿದ್ದರಾಮಯ್ಯ ಈ ಹಿಂದೆ 5 ವರ್ಷ ಮುಖ್ಯಮಂತ್ರಿಯಾಗಿದ್ದಾಗ ಕುರುಬ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ತಿಳಿಸಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ ಸಹ ಒಕ್ಕಲಿಗ ಸಮುದಾಯಕ್ಕೆ ಸ್ಥಾನಮಾನ ದೊರಕಿಸಿಕೊಟ್ಟಿದ್ದಾರೆ. ಆದರೆ, ಈಡಿಗ ಸಮುದಾಯದ ಮುಖಂಡರಿಗೆ ಸಮುದಾಯದ ಮೇಲೆ ಪ್ರೀತಿ ಇಲ್ಲ. ನಿಮ್ಮ ರಾಜಕೀಯ ಜೀವನದಲ್ಲಿ ಸಮುದಾಯವನ್ನು ಜೊತೆಯಾಗಿ ಸೇರಿಸಿಕೊಂಡು ಹೋಗದಿದ್ದಲ್ಲಿ ಮುಂದೆ ಸೋಲು ಕಾಣುತ್ತೀರಿ ಎಂದು ಸಮುದಾಯದ ಮುಖಂಡರಿಗೆ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಡಿ.ಕೆ ಶಿವಕುಮಾರ್
ನಾಲ್ಕು ದಶಕಗಳಿಂದ ಕಾಂಗ್ರೆಸ್‌ನಲ್ಲಿ ಬಿ.ಕೆ ಹರಿಪ್ರಸಾದ್ ನಿಷ್ಠಾವಂತರಾಗಿ ದುಡಿಯುತ್ತಿದ್ದಾರೆ. ಬಿ.ಕೆ ಹರಿಪ್ರಸಾದ್ ಅವರಿಗೆ ರಾಜ್ಯ ಸರ್ಕಾರದಲ್ಲಿ ಸ್ಥಾನ ಸಿಗದಿರುವುದು ದುರಂತ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಮುದಾಯಕ್ಕೆ ಒಂದೇ ಸೀಟು ನೀಡಲಾಗಿದೆ. ಇದು ಸಮುದಾಯಕ್ಕೆ ಮಾಡಿರುವ ಅನ್ಯಾಯ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈಡಿಗ, ನಾಮಧಾರಿ, ಬಿಲ್ಲವ ಸಮುದಾಯದವರಲ್ಲಿ ರಾಜಕೀಯ, ಸಾಮಾಜಿಕ ಜಾಗೃತಿ ಮೂಡಿಸಲು ಚಿಂತನ ಶಿಬಿರ ಆಯೋಜಿಸಲಾಗುತ್ತಿದೆ. ಜೂನ್ 3, 4 ರಂದು ಕುಮಟಾದಲ್ಲಿ ಬೃಹತ್ ಚಿಂತನ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಸಮುದಾಯಕ್ಕೆ ಆದ ಅನ್ಯಾಯದ ಬಗ್ಗೆ ಚರ್ಚಿಸಲಾಗುವುದು ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.