Monday, December 23, 2024

ಪ್ರಿಯಕರನೊಂದಿಗೆ ಗಂಡನನ್ನೇ ಕೊಲೆಗೈದು, ಅಪಘಾತವೆಂದು ಬಿಂಬಿಸಿದ ಖತರ್ನಾಕ್ ಪತ್ನಿ

ಕೋಲಾರ : ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ತಾಲೂಕಿನ ಜನ್ನಘಟ್ಟ ಗ್ರಾಮದ ಜನಪದ ಕಲಾವಿದ ಕೃಷ್ಣಮೂರ್ತಿ ಕೊಲೆಯಾಗಿದ್ದಾರೆ. ಪತ್ನಿ ಸೌಮ್ಯ ಹಾಗೂ ಪ್ರಿಯಕರ ಶ್ರೀಧರ್ ಸೇರಿದಂತೆ ಕೊಲೆಗೆ ಸಹಾಯ ಮಾಡಿದ ಮತ್ತೋರ್ವ ಗೆಳೆಯ ಶ್ರೀಧರ್ ಎಂಬಾತನನ್ನು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೋಮವಾರ ರಾತ್ರಿ ಕೋಲಾರ ತಾಲೂಕಿನ ಜನ್ನಘಟ್ಟ ರೈಲ್ವೆ ಬ್ರಿಡ್ಜ್ ಬಳಿ ಬೈಕ್‌ನಿಂದ ಬಿದ್ದು ಜನಪದ ಕಲಾವಿದ ಕೃಷ್ಣಮೂರ್ತಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂಬ ಸುದ್ದಿ ಹರಡಿತ್ತು. ಆದರೆ, ಕೃಷ್ಣಮೂರ್ತಿ ತಲೆಗೆ ಬಿದ್ದಿದ್ದ ಗಾಯ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಅನಾಮಧೇಯ ಮೂಲಗಳ ಬೆನ್ನತ್ತಿದ ಪೊಲೀಸರಿಗೆ ಸೌಮ್ಯ ತನ್ನ ಪ್ರಿಯಕರನಿಂದ ಕೊಲೆ ಮಾಡಿಸಿದ್ದಾಳೆ ಎನ್ನುವುದು ಬೆಳಕಿಗೆ ಬಂದಿದೆ.

ಕಳೆದ ಹಲವು ವರ್ಷಗಳಿಂದ ಕೃಷ್ಣಮೂರ್ತಿ ಹಾಗೂ ಸೌಮ್ಯ ಸಂಸಾರದಲ್ಲಿ ಬಿರುಕು ಮೂಡಿತ್ತು. ಪತ್ನಿ ಸೌಮ್ಯ ತನ್ನ ಮಾವನ ಮಗನಾದ ಶ್ರೀಧರ್ ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿತ್ತು. ಈ ವಿಚಾರವಾಗಿ ಕೃಷ್ಣಮೂರ್ತಿ ಹಾಗೂ ಪತ್ನಿ ಸೌಮ್ಯ ನಡುವೆ ಜಗಳ ಆಗುತ್ತಿದ್ದು, ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿಯೂ ಆಗಿತ್ತು. ಅದರೂ ಸಮಸ್ಯೆ ಬಗೆಹರಿಯದ ಹಿನ್ನಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನ ಕೊಲೆ ಮಾಡುವ ನಿರ್ದಾಕ್ಷಿಣ್ಯ ಕೆಲಸಕ್ಕೆ ಸೌಮ್ಯ ಪ್ಲಾನ್ ಮಾಡಿದ್ದಳು.

ರಾಡ್ ನಿಂದ ತಲೆಗೆ ಹೊಡೆದು ಹತ್ಯೆ

ಅದರಂತೆ ಸೋಮವಾರ ರಾತ್ರಿ ಎಂಟು ಗಂಟೆ ಸಮಯದಲ್ಲಿ ಕೋಲಾರದಿಂದ ಮನೆಗೆ ತೆರಳುತ್ತಿದ್ದ ಕೃಷ್ಣಮೂರ್ತಿಯನ್ನು, ಸ್ವಗ್ರಾಮ ಜನ್ನಘಟ್ಟ ಗ್ರಾಮದ ರೈಲ್ವೆ ಬ್ರಿಡ್ಜ್ ಬಳಿ ಡ್ರಾಪ್ ಕೇಳುವ ನೆಪದಲ್ಲಿ ಪ್ರಿಯಕರ ಶ್ರೀಧರ್ ಹಾಗೂ ಆತನ ಸ್ನೇಹಿತ ಶ್ರೀಧರ್ ಬೈಕ್ ನಿಲ್ಲಿಸಿದ್ದರು. ಮೃತ ಕೃಷ್ಣಮೂರ್ತಿ ಬೈಕ್ ನಿಲ್ಲಿಸಿದ ಕೂಡಲೇ ಆರೋಪಿಗಳು ರಾಡ್ ನಿಂದ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾರೆ. ನಂತರ ಸ್ಥಳದಿಂದ ಕಿರಾತಕರು ಪರಾರಿಯಾಗಿದ್ದು, ಕೃಷ್ಣಮೂರ್ತಿ ರಕ್ತದ ಮಡುವಿನಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಅಪಘಾತವೆಂದು ಬಿಂಬಿಸಲು ಯತ್ನ

ಬಳಿಕ, ಪತ್ನಿ ಸೌಮ್ಯ ಕೂಡ ಪ್ರಕರಣವನ್ನು ಅಪಘಾತವೆಂದು ಬಿಂಬಿಸಲು ಮನೆಯಲ್ಲಿ ಯತ್ನಿಸಿದ್ದಾಳೆ. ಅನುಮಾನಗೊಂಡ ಪೊಲೀಸರು ಸೌಮ್ಯ, ಪ್ರಿಯಕರ ಶ್ರೀಧರ್ ಹಾಗೂ ಆತನ ಸ್ನೇಹಿತ ಶ್ರೀಧರ್ ಮೂವರನ್ನು ವಶಕ್ಕೆ ಪಡೆದು ಬಾಯಿ ಬಿಡಿಸಿದ್ದಾರೆ. ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES