ಬೆಂಗಳೂರು : ಸಿದ್ದರಾಮಯ್ಯ ಸಿಎಂ ಆದ ತಕ್ಷಣ ಅರ್ಬನ್ ನಕ್ಸಲರುರೆಲ್ಲರೂ ಹೊರಗೆ ಬಂದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಆರೋಪ ಮಾಡಿದ್ದಾರೆ.
ಪಠ್ಯ ಪುಸ್ತಕ ಮರು ಪರಿಷ್ಕರಿಸಿ ವಿಚಾರ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಸರ್ಕಾರ ಇದ್ದಾಗ ಅರ್ಬನ್ ನಕ್ಸಲರೆಲ್ಲರೂ ಬಿಲ ಸೇರಿಕೊಂಡಿದ್ದರು. ಸಿದ್ದರಾಮಯ್ಯ ಸಿಎಂ ಆದ ತಕ್ಷಣ ಅವರೆಲ್ಲ ಬಿಲದಿಂದ ಹೊರಗೆ ಬಂದಿದ್ದಾರೆ ಎಂದು ಕುಟುಕಿದ್ದಾರೆ.
ಈಗ ಮತ್ತೆ ಚಿಕ್ಕಮಗಳೂರು ಭಾಗದಲ್ಲಿ ಇನ್ನು ಕೆಲವೆಡೆ ನಕ್ಸಲ್ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಛತ್ತಿಸಘಡದಲ್ಲಿ ಚಟುವಟಿಕೆ ಆದಂತೆ ಇಲ್ಲಿ ಹಾಗೆ ಆಗಬಹುದು. ಈಗ ಅವರು ಹೊರ ಬಂದಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಬಾಲ ಮುದುರಿಕೊಂಡು ಇದ್ರು. ಅವರಿಗೆ ಬುಲೆಟ್ ಮೇಲೆ ನಂಬಿಕೆ ಬ್ಯಾಲೆಟ್ ಮೇಲೆ ಅಲ್ಲ ಎಂದು ಛೇಡಿಸಿದ್ದಾರೆ.
ತಮ್ಮ ಬೆಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ
ಈಗ ಪಠ್ಯ ಬದಲಾವಣೆ ಮಾಡಿ ಎಂದು ಮುಂದೆ ಬಂದಿದ್ದಾರೆ. ತಮ್ಮ ಬೆಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಹೆಡಗೆವಾರ್ ಅವರ ದೇಶ ಪ್ರೇಮ, ಸಂಘದ ದೇಶ ಪ್ರೇಮ ಯಾರು ಪ್ರಶ್ನೆ ಮಾಡೋಕೆ ಆಗಲ್ಲ. ನಾವು ಕಾದು ನೋಡ್ತೇವೆ. ನಮಗೂ ಏನ್ ಮಾಡಬೇಕು ಗೊತ್ತಿದೆ. ಅನುಭವ ಕೂಡ ಪಾಠ ಕಲಿಸಿದೆ. ಈಗ ನಗರ ನಕ್ಸಲರು ಆಕ್ಟಿವ್ ಆಗಿದ್ದಾರೆ. ರಾಜ್ಯದ ಹಿತ ದೃಷ್ಟಿಯಿಂದ ಇದು ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತಾಗಿದೆ ಕಾಂಗ್ರೆಸ್ ಸ್ಥಿತಿ : ಸಿ.ಟಿ. ರವಿ
ಜಿಹಾದಿಗಳು ಈಗ ಆಕ್ಟಿವ್ ಆಗಿದ್ದಾರೆ
ಬಿಜೆಪಿ ಇದ್ದಾಗ ಕೇಶವ ಹೆಡಗೇವಾರ್ ಅವರ ಪಠ್ಯ ಹಾಕಲಾಗಿತ್ತು. ಅವರು ಜಿನ್ನಾ ಅಲ್ಲಾ ಅಲ್ವಾ? ಅವರು ಸ್ವಾತಂತ್ರ್ಯ ಹೋರಾಟಗಾರರು. ಡಾಕ್ಟರ್ ಜಿ ಅವರನ್ನ ವಿರೋಧಿಸೋರ ದೇಶಭಕ್ತಿಯನ್ನು ಪ್ರಶ್ನಿಸಬೇಕಾಗುತ್ತದೆ. ರಾಜು, ರುದ್ರೇಶ, ಪ್ರಶಾಂತ್ ಪೂಜಾರಿ ಸೇರಿ ಹಲವರ ಹತ್ಯೆಗೆ ಕಾರಣವಾದ ಜಿಹಾದಿಗಳು ಈಗ ಆಕ್ಟಿವ್ ಆಗಿದ್ದಾರೆ. ಇದೇ ಮುಂದುವರಿದರೆ 2019ರ ಫಲಿತಾಂಶ 2024ರಲ್ಲೂ ಮುಂದುವರಿಯುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಸಿದ್ದರಾಮಯ್ಯ ಅನುಭವದ ಆಧಾರದ ಮೇಲೆ ಆಡಳಿತ ಮಾಡ್ತಾರೆ ಎಂದು ನಂಬಿದ್ದೇವೆ. 2018ರಲ್ಲಿ ಮಾಡಿದಂತೆ ಮಾಡಿದ್ರೆ, 2024 ರಿಸಲ್ಟ್ ಉತ್ತರ ನೀಡುತ್ತೆ. ನಾವು ಸೋತು ಇರಬಹದು. ಸೀಟ್ ಕಡಿಮೆ ಆಗಿರಬಹುದು. ಆದ್ರೆ, ನಮಗೂ 36% ವೋಟ್ ಹಾಕಿದ್ದಾರೆ. ಈ ಚುನಾವಣೆ ಲೈಫ್ ಟೈಮ್ ಅಲ್ಲ. ಮತ್ತೆ ಮತ್ತೆ ಚುನಾವಣೆ ಬರ್ತಾ ಇರುತ್ತದೆ ನೆನಪಿರಲಿ ಎಂದು ಸಿ.ಟಿ ರವಿ ಹೇಳಿದ್ದಾರೆ.