ಬೆಂಗಳೂರು : ಕಾಂಗ್ರೆಸ್ ಐದು ಫ್ರೀ ಗ್ಯಾರಂಟಿ ಯೋಜನೆಗಳ ಜಾರಿ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಸರ್ಕಾರವೇ ಫ್ರೀ ಯೋಜನೆಗೆ ಕೋರ್ಟ್ನಲ್ಲಿ ತಡೆ ತರುವ ತಂತ್ರ ಮಾಡುತ್ತಿರಬಹುದು ಎಂದು ಕುಟುಕಿದ್ದಾರೆ.
ಫ್ರೀ ಯೋಜನೆ ಘೋಷಣೆ ಜಾರಿ ಮಾಡದೆ ಇದ್ದರೆ ಕೆಲವರು ಕಾನೂನು ಹೋರಾಟ ಮಾಡಲಿದ್ದಾರೆ ಎನ್ನುವ ಎಚ್ಚರಿಕೆ ನೀಡಿರುವ ಕುರಿತು ಮಾತನಾಡಿರುವ ಅವರು, ಸರ್ಕಾರದವರೇ ಈ ರೀತಿ ಹೋರಾಟ ಮಾಡೋದಕ್ಕೆ ಹೇಳಿರಬಹುದು. ಕೋರ್ಟ್ ನಲ್ಲಿ ಫ್ರೀ ಯೋಜನೆಗೆ ತಡೆ ತರುವ ತಂತ್ರ ಇದ್ದರೂ ಇರಬಹುದು. ಹೇಳಲಿಕ್ಕೆ ಆಗುವುದಿಲ್ಲ ಎಂದು ಟಕ್ಕರ್ ಕೊಟ್ಟಿದ್ದಾರೆ.
ಉಚಿತ ಯೋಜನೆಗಳ ಬಗ್ಗೆ ನಿನ್ನೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಸುಧೀರ್ಘ ಸಭೆಯಲ್ಲಿ ಏನಾಗಿದೆ ಗೊತ್ತಿಲ್ಲ. ಎಲ್ಲಾ ಉಚಿತ ನೀಡಿದರೆ, ಅಭಿವೃದ್ಧಿ ಕಾರ್ಯ ಕುಂಟಿತ ಆಗಲಿದೆ. ಎಲ್ಲರಿಗೂ ಸಿಗುತ್ತದೆ ಅಂತ ಮೊದಲು ಆಶ್ವಾಸನೆ ನೀಡಿದ್ದಾರೆ. ಅತ್ತೆಗೋ, ಸೊಸೆ ಗೋ ಅಂತ ಮೊದಲು ಹೇಳಿರಲಿಲ್ಲ. ಏನು ಮಾಡಲಿದ್ದಾರೆ ಅಂತ ಕರ್ನಾಟಕದ ಜನತೆಗೆ ಕಾಡುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಿಜೆಪಿಯವರು 24 ಗಂಟೆ ಬರೀ ಸುಳ್ಳು ಹೇಳುತ್ತಾರೆ : ಸಚಿವ ಶಿವರಾಜ್ ತಂಗಡಗಿ
ಯಾಮಾರಿಸಿ ಗೆಲ್ಲಬೇಕು ಅಂತ ಮಾಡಿದ್ದಾರೆ
ಜೂನ್ 1ರಂದು ಕ್ಯಾಬಿನೆಟ್ ಮೀಟಿಂಗ್ ಇದೆ. ಅಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ಆರ್ಥಿಕವಾಗಿ ಕಷ್ಟ ಅನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಜನರನ್ನು ಯಾಮಾರಿಸಿ ಗೆಲ್ಲಬೇಕು ಅಂತ ಮಾಡಿದ್ದಾರೆ. ಜನ ಈಗ ಅಧಿಕಾರ ಕೊಟ್ಟಿದ್ದಾರೆ. ಏನು ಮಾಡುತ್ತಾರೆ ಕಾದು ನೋಡೋಣ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಯಾವುದೇ ತನಿಖೆ ಮಾಡಬಹುದು
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಬಿಜೆಪಿ ಅವಧಿಯಲ್ಲಿ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಸರ್ಕಾರ ತನಿಖೆಗೆ ಆದೇಶಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಬೊಮ್ಮಾಯಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಐಡಿ ತನಿಖೆ ಮಾಡಬಹುದು ಅಂತ ನಾನೇ ಹಿಂದೆ ದೂರು ನೀಡಿದ್ದೆ. ಚುನಾವಣಾ ನೀತಿ ಸಂಹಿತೆ ಇದ್ದ ಹಿನ್ನೆಲೆ ಎಫ್‌ಐಆರ್ ಆಗಿರಲಿಲ್ಲ. ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಇರಲಿ. ಯಾವುದೇ ತನಿಖೆ ಮಾಡಬಹುದು ಎಂದು ಸವಾಲೆಸೆದಿದ್ದಾರೆ.
ಹೊಸ ಸರ್ಕಾರ ಬಂದಿದೆ ಯಾವುದೇ ರೀತಿ ತನಿಖೆ ನಡೆಸಲಿ. ಎದುರಿಸಲು ನಾವು ಸಿದ್ದ. ತನಿಖೆ ಪಾರದರ್ಶಕವಾಗಿರಲಿ. ತನಿಖೆ ಕಾಮಗಾರಿಗೆ ಅಡ್ಡಿ ಆಗಬಾರದು. ಟಾರ್ಗೆಟ್ ಮಾಡಿ ಕಾಮಗಾರಿ ಬದಲಾವಣೆ ಮಾಡುವ ದುರುದ್ದೇಶ ಆಗಬಾರದು ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.