Monday, December 23, 2024

ಬಿಜೆಪಿಯವರು 24 ಗಂಟೆ ಬರೀ ಸುಳ್ಳು ಹೇಳುತ್ತಾರೆ : ಸಚಿವ ಶಿವರಾಜ್ ತಂಗಡಗಿ

ಚಿತ್ರದುರ್ಗ : ಬಿಜೆಪಿಯವರು 24 ತಾಸು ಬರೀ ಸುಳ್ಳು ಹೇಳುತ್ತಾರೆ. ನಮ್ಮಕಡೆ ಬೆರಳು ತೋರುತ್ತಾರೆ ಎಂದು ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕುಟುಕಿದ್ದಾರೆ.

ಚಿತ್ರದುರ್ಗ ಬೋವಿ ಮಠಕ್ಕೆ ಭೇಟಿ ನೀಡಿ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳನ್ನು ಭೇಟಿ ಮಾಡಿದ ಬಳಿಕ ಅವರು ಕಾಂಗ್ರೆಸ್ ಗ್ಯಾರಂಟಿ ಜಾರಿ ಬಗ್ಗೆ ವಿಪಕ್ಷಗಳ ಟೀಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಐದು ಗ್ಯಾರಂಟಿ ಜಾರಿ ಮಾಡಲ್ಲ ಅಂತ ನಾವು ಹೇಳಿಲ್ಲವಲ್ಲ. ಜೂನ್ 1ರಂದು ಜಾರಿ ಮಾಡುವುದಾಗಿ ಹೇಳಿದ್ದೇವೆ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಕಮಿಟ್ ಮೆಂಟ್ ಇದೆ. ಬಿಜೆಪಿ, ಜೆಡಿಎಸ್ ನಾಯಕರು ಸಮಾಧಾನವಾಗಿ ಇರಬೇಕು. ಹುಟ್ಟಿದ ಮಗು ಏಕಾಏಕಿ ಓಡಾಡಲು ಆಗದು. ಕಾಂಗ್ರೆಸ್ ಗ್ಯಾರಂಟಿ ಕೊಟ್ಟಂತೆ ನಡೆದುಕೊಳ್ಳುತ್ತದೆ. ಕಾಂಗ್ರೆಸ್ ಅಂದ್ರೆ ಗ್ಯಾರಂಟಿ, ಬಿಜೆಪಿಯಂತೆ ಬೋಗಸ್ ಅಲ್ಲ. 40 ಪರ್ಸೆಂಟ್ ಅಲ್ಲ ಎಂದು ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್​ ಗ್ಯಾರಂಟಿಗಳು ವಿಳಂಬವಾಗುವುದಿಲ್ಲ ತಾಳ್ಮೆ ಇರಲಿ ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬಿಜೆಪಿಯಲ್ಲಿ ಮೂರ್ನಾಲ್ಕು ಜನ ಸಿಎಂ ಆಗ್ತಾರೆ

ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರೋ ಇಲ್ವೊ, ಗ್ಯಾರಂಟಿ ಇಲ್ಲ ಎಂಬ ಬಿ.ವೈ.ವಿಜಯೇಂದ್ರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಐದು ವರ್ಷದ ಅವಧಿ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ. ಬಿಜೆಪಿಯವರಿಗೆ ಕಾಡುತ್ತದೆ ಎಂದು ಎಲ್ಲರಿಗೂ ಕಾಡುತ್ತದೆಂಬ ಭಾವನೆ ಬೇಡ. ಬಿಜೆಪಿ ಸರ್ಕಾರದಲ್ಲಿ ಮೂರ್ನಾಲ್ಕು ಜನ ಸಿಎಂ ಆಗ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

ಕಪ್ಪು ಹಣ ವಾಪಸ್ ತರುತ್ತೇವೆ ಅಂದಿದ್ರು

ಕೇಂದ್ರ ಬಿಜೆಪಿ ಪ್ರತಿ ವ್ಯಕ್ತಿಯ ಖಾತೆಗೆ 15 ಲಕ್ಷ ರೂಪಾಯಿ ಹಣ ಹಾಕುವ ವಿಚಾರದ ಬಗ್ಗೆ ಮಾತನಾಡಿ, ವಿದೇಶದಲ್ಲಿರುವ ನಮ್ಮ ದೇಶದ ಕಪ್ಪು ಹಣ ವಾಪಸ್ ತರುತ್ತೇವೆ ಎಂದಿದ್ದರು. ಈವರೆಗೆ ಎಷ್ಟು ಕಪ್ಪು ಹಣ ತಂದಿದ್ದಾರೆಂದು ಹೇಳಲಿ. ಬಿಜೆಪಿಯವರು 24 ತಾಸು ಸುಳ್ಳು ಹೇಳುತ್ತಾರೆ. ನಮ್ಮಕಡೆ ಬೆರಳು ತೋರುತ್ತಾರೆ. ಈಗ ರಾಜ್ಯದ ಜನರಿಗೆ ಗೊತ್ತಾಗಿದೆ. ಮುಂದೆ ದೇಶದ ಜನರಿಗೆ ತಿಳಿಯಲಿದೆ. ಪಕ್ಷ, ಸಿಎಂ, ಡಿಸಿಎಂ ನೀಡಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES