ಬೆಂಗಳೂರು : ಹೇ ಮಾದೇವಪ್ಪ.. ನಿಂಗೂ ಫ್ರೀ.. ನಂಗೂ ಫ್ರೀ ಅಂದಿದ್ರು.. ಸಿಎಂ ಸಿದ್ದರಾಮಯ್ಯ ಬಳಿ BPL ಕಾರ್ಡ್ ಇಲ್ಲ.. ಮಹದೇವಪ್ಪ ಬಳಿಯೂ BPL ಕಾರ್ಡ್ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಲೇವಡಿ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಕ್ಯಾಬಿನೆಟ್ ನಲ್ಲಿ ಗ್ಯಾರಂಟಿ ಘೋಷಿಸುತ್ತೇವೆ ಎಂದಿದ್ದರು. ಈಗ ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತಾಗಿದೆ ಕಾಂಗ್ರೆಸ್ ಸ್ಥಿತಿ ಎಂದು ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಮುನ್ನ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ. ಈಗ ಕಾಂಗ್ರೆಸ್ ಪಕ್ಷ ನೆಪ ಹುಡುಕುತ್ತಿದೆ. ಏಕೆ ನೆಪ ಹುಡುಕಬೇಕು? ಹೇಳಿದ್ದೀರಾ.. ಜನರನ್ನು ನಂಬಿಸಿದ್ದೀರಾ.. ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ಸಿ.ಟಿ ರವಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಗ್ಯಾರಂಟಿಗಳು ವಿಳಂಬವಾಗುವುದಿಲ್ಲ ತಾಳ್ಮೆ ಇರಲಿ ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಮೊದಲು ಕಂಡಿಷನ್ ಹಾಕಿರಲಿಲ್ಲ. ಎಲ್ಲರಿಗೂ ಎಲ್ಲಾ ಫ್ರೀ ಎಂದಿದ್ರಿ. ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯೂ ಆಯ್ತು, ಯಾಕೆ ತಡ ಮಾಡ್ತೀರಾ? ಸಬೂಬು, ತಕರಾರು ಇಲ್ಲದೆ ಎಲ್ಲಾ ಘೋಷಣೆಗಳನ್ನು ಜಾರಿ ಮಾಡಿ ಎಂದು ಗ್ಯಾರಂಟಿ ಜಾರಿಗೆ ಸಮಯ ಕೇಳಿದ ಕಾಂಗ್ರೆಸ್ಸಿಗೆ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.
ನಾವೇನು ಡಂಗೂರ ಹೊಡೆದಿದ್ವಾ?
15 ಲಕ್ಷ ಕೊಡ್ತೀವಿ ಅಂತ ಮನೆಗೆ ಹೋಗಿ, ಕಾರ್ಡ್ ಹಂಚಿ, ಸಹಿ ಮಾಡಿಸ್ಕೊಂಡು ಬಂದಿದ್ವಾ? ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಹೇಳದೆ ರೈತರ ಖಾತೆಗೆ 10 ಸಾವಿರ ಹಾಕಿದ್ದೇವೆ. ನಾವೇನು ಮೊದಲೇ ಡಂಗೂರ ಹೊಡೆದಿದ್ವಾ? ವೋಟ್ ಹಾಕಿದ್ರೆ ಶೌಚಾಲಯ ನಿರ್ಮಾಣ ಮಾಡಿ ಕೊಡ್ತೀವಿ ಅಂತ ಹೇಳಿದ್ವಾ? 12 ಕೋಟಿ ಶೌಚಾಲಯ ನಿರ್ಮಾಣ ಮಾಡಿ ಕೊಟ್ಟಿದ್ದೇವೆ. ಡಿ.ಕೆ ಶಿವಕುಮಾರ್ ಅವರಿಗೆ ಮರೆತೋಗಿದ್ರೆ ನೆನಪು ಮಾಡ್ತೀನಿ.12 ಕೋಟಿ ಶೌಚಾಲಯ ಆಗಿದೆ ಎಂದು ಡಿಕೆಶಿಗೆ ಹೇಳಿಕೆಗೆ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.