ತುಮಕೂರು : ಸಿದ್ದಗಂಗಾ ಮಠದ ಅನುದಾನವನ್ನು ಶಾಶ್ವತವಾಗಿ ತಡೆಹಿಡಿಯುವ ಧಮ್ಮು ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಹೇಳಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತುಮಕೂರಿನ ಸಿದ್ದಗಂಗಾ ಮಠದ 10 ಕೋಟಿ ರೂಪಾಯಿ ಅನುದಾನ ತಡೆಹಿಡಿದಿದೆ ಎಂದು ಆರೋಪ ಮಾಡಿದ್ದಾರೆ.
ನನ್ನ ಕ್ಷೇತ್ರದ 20 ಕೋಟಿ ರೂಪಾಯಿ ಅನುದಾನವನ್ನು ತಡೆಹಿಡಿಯಲಾಗಿದೆ. ಅದರಲ್ಲಿ ಸಿದ್ದಗಂಗಾ ಮಠದ 10 ಕೋಟಿ ರೂಪಾಯಿ ಸಹ ಸೇರಿದೆ. ಬಿಜೆಪಿ ಸರ್ಕಾರ ಮಠದಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡಿತ್ತು. ಅದನ್ನು ಕಾಂಗ್ರೆಸ್ ಸರ್ಕಾರ ತಡೆಹಿಡಿದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯ ಬಳಿ BPL ಕಾರ್ಡ್ ಇಲ್ಲ.. ಮಹದೇವಪ್ಪ ಬಳಿಯೂ ಇಲ್ಲ : ಸಿ.ಟಿ. ರವಿ
ಅನುದಾನ ಬಿಡುಗಡೆ ಮಾಡದಿದ್ರೆ ಹೊರಾಟ
ರಾಜ್ಯ ಸರ್ಕಾರಕ್ಕೆ ಸಿದ್ದಗಂಗಾ ಮಠದ ಅನುದಾನವನ್ನು ಶಾಶ್ವತವಾಗಿ ತಡೆಹಿಡಿಯುವ ಧಮ್ಮು ಇಲ್ಲ. ಒಟ್ಟು 20 ಸಾವಿರ ಕೋಟಿ ರೂಪಾಯಿ ಅನುದಾನ ತಡೆಹಿಡಿದಿದ್ದಾರೆ. ಮಠದ ಅನುದಾನವನ್ನು ಪುನಃ ನೀಡುವ ವಿಶ್ವಾಸ ನನಗಿದೆ. ಅನುದಾನ ಬಿಡುಗಡೆ ಮಾಡದಿದ್ರೆ ಉಗ್ರ ಹೊರಾಟ ನಡೆಸಲಾಗುತ್ತದೆ ಎಂದು ಸುರೇಶ್ ಗೌಡ ತಿಳಿಸಿದ್ದಾರೆ.
ಇದು ಯಾವ ಸರ್ಕಾರ ರೀ, ಜನರಿಂದ ಬಂದ ಸರ್ಕಾರ. ಅನುದಾನ ಯಾಕೆ ಕೊಡಲ್ಲ. ಕ್ಷೇತ್ರದಲ್ಲಿ ಭ್ರಷ್ಟಾಚಾರ ಆಗಿದ್ರೆ ಅನುದಾನ ನಿಲ್ಲಿಸಲಿ. ಅನಾವಶ್ಯಕವಾಗಿ ಅನುದಾನ ಯಾಕೆ ತಡೆಹಿಡಿಯಬೇಕು. ಸಿದ್ದಗಂಗಾ ಮಠದ ಅನುದಾನವನ್ನು ಯಾಕೆ ತಡೆಹಿಡಿಯಲಾಗಿದೆ. ಉಚಿತ ಗ್ಯಾರಂಟಿ ಭರವಸೆ ಜಾರಿಗೊಳಿಸದೆ ಕಾಂಗ್ರೆಸ್ ರಾಜ್ಯದ ಜನರಿಗೆ ಮೋಸ ಮಾಡುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.