Monday, December 23, 2024

ಕನಿಷ್ಠ 20 ಸ್ಥಾನ ಗೆದ್ದು ವರಿಷ್ಠರಿಗೆ ಗಿಫ್ಟ್ ನೀಡಬೇಕು : ಸಚಿವರಿಗೆ ಟಾಸ್ಕ್ ಕೊಟ್ಟ ಸಿದ್ದರಾಮಯ್ಯ

ಬೆಂಗಳೂರು : ಒಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಬರಲಿದೆ. ನಾವು ಕನಿಷ್ಠ 20 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ವರಿಷ್ಠರಿಗೆ ಗಿಫ್ಟ್ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಸಚಿವರಿಗೆ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ.

ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಸಚಿವರೊಂದಿಗೆ ಚರ್ಚೆ ನಡೆಸಿರುವ ಸಿಎಂ ಸಿದ್ದರಾಮಯ್ಯ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಕನಿಷ್ಠ 20 ಸ್ಥಾನ ಗೆಲ್ಲಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾಗಾಂಧಿ,  ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಗೆ ಉಡುಗೊರೆ ನೀಡಬೇಕು ಎಂದಿದ್ದಾರೆ.

ಈ ಗುರಿ ಇಟ್ಟುಕೊಂಡು ಶ್ರದ್ದೆ, ಪ್ರಾಮಾಣಿಕತೆ ಹಾಗೂ ಚುರುಕಾಗಿ ಜವಾಬ್ದಾರಿ ನಿರ್ವಹಿಸಿ ಎಂದು ನೂತನ ಸಚಿವರಿಗೆ ಮನವರಿಕೆ ಮಾಡಿದ್ದಾರೆ. ನಾವು ನೀಡಿರುವ ಗ್ಯಾರಂಟಿಗಳು ಜನರಿಗೆ ಸಮರ್ಪಕವಾಗಿ ತಲುಪುವಂತೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ಹಿಂದಿನ ಬಾರಿಯ ತಪ್ಪುಗಳು ಈ ಬಾರಿ ಮರುಕಳಿಸಬಾರದು ಎಂದು ತಾಕೀತು ಮಾಡಿದ್ದಾರೆ.

ಭ್ರಷ್ಟಾಚಾರಕ್ಕೆ ಬರೆ ಎಳೆಯಬೇಕು

ಕೇಂದ್ರದ ದುರಾಡಳಿತವನ್ನು ಕರ್ನಾಟಕದ ಮೂಲಕ ಕೊನೆಗೊಳಿಸಲು ಪರಿಸ್ಥಿತಿ ಹದವಾಗಿದೆ. ಇದನ್ನು ನಾವು ಮರೆಯಬಾರದು. ಹೀಗಾಗಿ, ಸಚಿವರು ತಮಗೆ ಉಸ್ತುವಾರಿ ವಹಿಸಲಾಗುವ ಜಿಲ್ಲೆಗಳಿಗೆ ಹೆಚ್ಚೆಚ್ಚು ಪ್ರವಾಸ ಮಾಡಬೇಕು. ಜಿಲ್ಲೆ, ತಾಲ್ಲೂಕು ಮಟ್ಟದಲ್ಲೇ ಸಮಸ್ಯೆಗಳನ್ನು ಬಗೆಹರಿಸಬೇಕು. ಅಧಿಕಾರಿಗಳ ಮೇಲೆ ಕಟ್ಟು ನಿಟ್ಟಿನ ನಿಗಾ ಇಟ್ಟು ಭ್ರಷ್ಟಾಚಾರಕ್ಕೆ ಬರೆ ಎಳೆಯಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ : ಈಗ ‘ನಾಲ್ಕುವರೆ ವರ್ಷ ಗೇಮ್’ ನಮ್ಮದು.. ನಾವು ಆಡ್ತೀವಿ : ಡಿ.ಸಿ ಗೌರಿಶಂಕರ್ ಟಕ್ಕರ್

ಜನ ಬಿಜೆಪಿ ದುರಾಡಳಿತ ತಿರಸ್ಕರಿಸಿದ್ದಾರೆ

ಖಾತೆ ಹಂಚಿಕೆ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ನೀವೆಲ್ಲಾ ಸಕ್ರಿಯರಾಗಿ. ವಿರೋಧಪಕ್ಷದಲ್ಲಿದ್ದಾಗ ನಾವು ನಡೆಸಿದ ಹೋರಾಟದ ಫಲವಾಗಿ ಜನತೆ ಬಿಜೆಪಿಯ ದುರಾಡಳಿತವನ್ನು ತಿರಸ್ಕರಿಸಿ ನಮ್ಮ ಕೈ ಹಿಡಿದಿದ್ದಾರೆ. ಈಗ ನಾವು ಸರ್ಕಾರವನ್ನು, ಸರ್ಕಾರದ ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಸೂಚನೆ ನೀಡಿದ್ದಾರೆ.

ನಾಡಿನ ಜನತೆ ನಮಗೆ ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಜನಪರ ಆಡಳಿತ ನೀಡಬೇಕು. ಜನರ ಸಮಸ್ಯೆಗಳನ್ನು ಕೇಳಿಸಿಕೊಳ್ಳಿ. ತಮ್ಮ ತಮ್ಮ ಕ್ಷೇತ್ರದಲ್ಲೇ ಸಮಸ್ಯೆ ಬಗೆಹರಿಸಲು ಬೇಕಾದ ಕ್ರಿಯಾಶೀಲತೆಯನ್ನು ರೂಢಿಸಿಕೊಳ್ಳಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

RELATED ARTICLES

Related Articles

TRENDING ARTICLES