ಬೆಂಗಳೂರು : ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವೇಷ ರಾಜಕಾರಣವನ್ನು ವಿರೋಧಿಸಿ ನಾವು ಪ್ರತಿಭಟಿಸುತ್ತೇವೆ. ತಿಂಗಳ ಒಳಗೆ ಎಲ್ಲವೂ ಸರಿಯಾಗದಿದ್ದರೆ ಹೋರಾಟ ನಿಶ್ಚಿತ ಎಂದು ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು 20 ದಿನಗಳಾದರೂ ಹಂಚಿಕೆ ಮಾಡಿಲ್ಲ. ಸರ್ಕಾರಿ ನೌಕರರು ಏಟು ತಿನ್ನುವ ಪರಿಸ್ಥಿತಿ ಬಂದಿದೆ. ವಿದ್ಯುತ್ ಬಿಲ್ ಕಲೆಕ್ಟ್ ಮಾಡಲು ಹೋದವರಿಗೆ ಏಟು ಬೀಳುತ್ತಿದೆ. ಕಾಂಗ್ರೆಸ್ ವಿಜಯೋತ್ಸವದಲ್ಲೇ ಗಲಭೆ ಮಾಡಿದ್ದು, ದ್ವೇಷದ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕಟೀಲ್ ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ : ಘಟಾನುಘಟಿಗಳಿಗೆ ‘ಕೈ’ ತಪ್ಪಿದ ಮಂತ್ರಿಗಿರಿ : ಇವರೇ ನೂತನ ಸಚಿವರು
ಈ ಬಗ್ಗೆ ನನಗೆ ದುಃಖ ಇದೆ
ಇನ್ನೂ, ಬಿಜೆಪಿ ಸರ್ಕಾರದ ಮೇಲೆ ಮಾಡಿದ ಆರೋಪಗಳ ಪೂರ್ಣ ತನಿಖೆ ನಡೆಯಲಿ. ಸಿಎಂ ಸಿದ್ದರಾಮಯ್ಯ ಮೇಲಿರುವ ಲೋಕಾಯುಕ್ತ ಕೇಸನ್ನೂ ತನಿಖೆ ಮಾಡಲಿ. ಕರಾವಳಿ ಜಿಲ್ಲೆಗೆ ಒಂದೂ ಮಂತ್ರಿ ಪಟ್ಟ ಇಲ್ಲ, ಈ ಬಗ್ಗೆ ದುಃಖ ಇದೆ ಎಂದು ನಳಿನ್ ಕುಮಾರ್ ಕಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭರವಸೆಗಳಿಗೆ ಮತ ಹಾಕಿದ್ದಾರೆ
ಬಿಜೆಪಿ ನಾಯಕರ ಆರೋಪಕ್ಕೆ ರಾಜ್ಯ ಕಾಂಗ್ರೆಸ್ ತಿರುಗೇಟು ನೀಡಿದೆ. ಚುನಾವಣೆಗೆ ನಾವೂ ಭರವಸೆಗಳನ್ನು ಕೊಟ್ಟಿದ್ದೆವು. ಬಿಜೆಪಿಯೂ ಭರಪೂರ ಭರವಸೆಗಳನ್ನು ಕೊಟ್ಟಿತ್ತು. ಇಂದು ಬಿಜೆಪಿ ಜನತೆ ಕಾಂಗ್ರೆಸ್ಸಿನ ಭರವಸೆಗಳಿಗೆ ಮತ ಹಾಕಿದ್ದಾರೆ ಎನ್ನುತ್ತಿದೆ. ಬಿಜೆಪಿಯ ಭರವಸೆಗಳನ್ನು ಜನತೆ ನಂಬಿಲ್ಲ, ಸುಳ್ಳಿನ ಬಿಜೆಪಿ ಮೇಲೆ ಜನತೆಗೆ ಭರವಸೆ ಉಳಿದಿಲ್ಲ ಎನ್ನುವುದನ್ನು ಬಿಜೆಪಿ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದೆ ಎಂದು ಹೇಳಿದೆ.